×
Ad

ಜ.10ರಂದು ಲವಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ

Update: 2026-01-05 18:39 IST

ಮಂಗಳೂರು, ಜ.5: ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ನಾಲ್ಕನೇ ವರ್ಷದ ಹೊನಲು ಬೆಳಕಿನ ಲವಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ-2026 ಜನವರಿ 10ರಂದು ಬೆಳಗ್ಗೆ ಗಂಟೆ 9ಕ್ಕೆ ಆರಂಭಗೊಳ್ಳಲಿದೆ

ಮೋರ್ಲ- ಬೋಳ ನರಿಂಗಾನದಲ್ಲಿ ನಡೆಯಲಿರುವ ಕಂಬಳೋತ್ಸವವನ್ನು ಒಡಿಯೂರುವ ಶ್ರೀ ಗುರುದೇವದತ್ತ ಸಂಸ್ಥಾನಂನ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಲಿದ್ದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ . ಎಮ್. ಮೋಹನ್ ಆಳ್ವ ದೀಪ ಬೆಳಗಿಸುವರು. ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸುವರು. ವಿವಿಧ ಧಾರ್ಮಿಕ, ಸಾಮಾಜಿಕ ಸೇರಿದಂತೆ ಗಣ್ಯರು, ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ನರಿಂಗಾ ಕಂಬಳ ಸಮಿತಿಯ ಅಧ್ಯಕ್ಷ, ಸ್ಪೀಕರ್ ಯು.ಟಿ.ಖಾದರ್ ಮಾಹಿತಿ ನೀಡಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಂಜೆ ನಡೆಯುವದ ಸಭಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಎಚ್ ಕೆ ಪಾಟೀಲ್, ಕಾರ್ಮಿಕ ಸಚಿವರಾಗಿರುವ ಸಂತೋಷ್ ಲಾಡ್, ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಂಸದ  ಬ್ರಿಜೇಷ್ ಚೌಟ, ಕಾಸರಗೋಡು ಸಂಸದ ರಾಜು ಮೋಹನ್ ಉನ್ನಿತ್ತನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್, ಬಂಜಾರ ಗ್ರೂಫ್ ಆಫ್ ಹೊಟೇಲ್ಸ್ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಸೋ, ಅದಾನಿ ಗ್ರೂಪಿನ ಪ್ರೆಸಿಡೆಂಟ್ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಕುಮಾರ್ ಆಳ್ವ, ನ್ಯಾಷನಲ್ ಕಮಿಷನ್ ಫಾರ್ ಎಲೈಡ್ ಅಂಡ್ ಹೆಲ್ತ್ ಕೇರ್ ಪ್ರೊಫೆಶನ್ಸ್ ಕರ್ನಾಟಕ ಚೇರ್ಮನ್ ಡಾ. ಯು. ಟಿ. ಇಫ್ತಿಕರ್ ಅಲಿ, ಜಿಲ್ಲೆಯ ಶಾಸಕರು, ವಿಧಾನಪರಿಷ ಸದಸ್ಯರು ಮಾಜಿ ಸಚಿವರು, ಮಾಜಿ ಶಾಸಕರು, ವಿವಿಧ ನಿಗಮ ಮಂಡಳಿ ಅಧ್ಯಕ್ಷರು, ಉದ್ಯಮಿಗಳು, ಯುನಿವರ್ಸಿಟಿಗಳ ಕುಲಾಧಿಪತಿಗಳು, ಧಾರ್ಮಿಕ ಪರಿಷತ್ ಸದಸ್ಯರು, ವಿವಿಧ ಪಕ್ಷಗಳ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ಜಿಲ್ಲಾಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕಾರಿಯ ಜೋಕಟ್ಟೆ, ಸಹಕಾರ ರತ್ನ ಪುರಸ್ಕೃತ ಟಿ. ಜಿ. ರಾಜಾರಾಮ್ ಭಟ್, ಭಾಸ್ಕರ್ ಕೋಟ್ಯಾನ್ ಹಾಗೂ ಬಾರ್ಕೂರು ಶಾಂತಾರಾಮ್ ಶೆಟ್ಟಿ, ಕರ್ನಾಟಕ ಕ್ರೀಡಾ ರತ್ನ ಭಾಸ್ಕರ್ ದೇವಾಡಿಗ, ವಿಶ್ವಕಪ್ ವಿಜೇತ ಭಾರತದ ತಂಡದಾಟಗಾರ್ತಿ ಧನಲಕ್ಷ್ಮಿ ಪೂಜಾರಿ ಕಾರ್ಕಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ ಪಂಪದ ಚಿಪ್ಪಾರು, ಪ್ರತಿಭಾನ್ವಿತ ವಿದ್ಯಾರ್ಥಿನಿ ಅಪೇಕ್ಷ ಪುಂಡಿಕಾಯಿ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು.

ವಿಶೇಷವೆಂದರೆ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ ಕೋಣಗಳ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಟ್ರೋಫಿ ಕೊಟ್ಟು ಗೌರವಿಸಲಾಗುವುದು.

ಜ.12ರಂದು ಗ್ರಾಮೋತ್ಸವ

ನರಿಗಾನ ಗ್ರಾಮ ಪಂಚಾಯತ್ ಆಶ್ರಯದಲ್ಲಿ ನ.12ರಂದು ನರಿಂಗಾನ ಗ್ರಾಮೋತ್ಸವ ಎಂಬ ವಿಶೇಷ ಸ್ನೇಹ ಸಮ್ಮಿಲನ, ಪ್ರತಿಭಾ ಪುರಸ್ಕಾರ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ನೃತ್ಯವೈಭವ, ಸಂಗೀತ ರಸಮಂಜರಿ ಕ್ರೀಡಾಕೂಟಗಳು ನಡೆಯಲಿಕ್ಕಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುವರು.

ಪತ್ರಿಕಾಗೋಷ್ಟಿಯಲ್ಲಿ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ, ಕಣಚೂರು ಸಮೂಹ ಸಂಸ್ಥೆಯ ಚೇರ್ ಮೆನ್ ಯು. ಕೆ. ಮೋನು, ಉಪಾಧ್ಯಕ್ಷ ಮ್ಯಾಕ್ಸಿಯಂ ಡಿಸೋಜ ಉಪಸ್ಥಿತರಿದ್ದರು.

ಕನೆ ಹಲಗೆ ವಿಭಾಗದಲ್ಲಿ ಏಳೂವರೆ ಕೋಲು ನೀರು ಹಾಯಿಸುವ ಕೋಣಗಳ ತಂಡಕ್ಕೆ 1 ಪವನ್ ಚಿನ್ನ ಹಾಗೂ ಟ್ರೋಫಿ, ಆರೂವರೆ ಕೋಲು ನೀರು ಹಾಯಿಸುವ ಕೋಣಗಳಿಗೆ ಮುಕ್ಕಾಲು ಪವನ್ ಚಿನ್ನ ಹಾಗೂ ಟ್ರೋಫಿ ನೀಡಲಾಗುವುದು. ಅಡ್ಡ ಹಲಗೆ ವಿಭಾಗದ ಪ್ರಥಮ ವಿಜೇತ ಕೋಣಗಳ ತಂಡಕ್ಕೆ 1 ಪವನ್ ಚಿನ್ನ, ದ್ವಿತೀಯ ಸ್ಥಾನ ಅರ್ಧ ಪವನ್, ತೃತೀಯ ಹಾಗೂ ಚತುರ್ಥ ಸ್ಥಾನ ಪಡೆವ ತಂಡಕ್ಕೆ ತಲಾ ಕಾಲ್ ಪವನ್ ಚಿನ್ನದೊಂದಿಗೆ ಟ್ರೋಫಿ ನೀಡಿ ಗೌರವಿಸಲಾಗುವುದು.

ಹಗ್ಗ ಸೀನಿಯರ್ ವಿಭಾಗದಲ್ಲಿ ಪ್ರಥಮ 2 ಪವನ್, ದ್ವಿತೀಯ 1 ಪವನ್, ತೃತೀಯ ಹಾಗೂ ಚಚುರ್ಥ ಅರ್ಧ ಪವನ್ ಚಿನ್ನದ ಜತೆ ಟ್ರೋಫಿ ನೀಡಲಾಗುವುದು. ನೇಗಿಲು ಸೀನಿಯರ್ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಪಡೆವ ತಂಡಗಳಿಗೆ ತಲಾ ಅರ್ಧ ಪವನ್ ಚಿನ್ನ ಹಾಗೂ ಟ್ರೋಫಿ ನೀಡಲಾಗುವುದು. ನೇಗಿಲು ಹಾಗೂ ಹಗ್ಗ ಜೂನಿಯರ್ ವಿಭಾಗದಲ್ಲಿ ಪ್ರಥಮ ಒಂದು ಪವನ್, ದ್ವಿತೀಯ ಅರ್ಧ ಹಾಗೂ ತೃತೀಯ ಮತ್ತು ಚತುರ್ಥ ಕಾಲ್ ಪವನ್ ಚಿನ್ನ ಹಾಗೂ ಟ್ರೋಫಿ ನೀಡಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News