×
Ad

ರಾಜ್ಯದ ಪ್ರತಿಯೊಂದು ಪ್ರಾದೇಶಿಕ ಭಾಷೆಗಳಿಗೂ ಅಕಾಡಮಿ ಸ್ಥಾಪನೆಯಾಗಲಿ : ಎ.ಕೆ.ಹಿಮಕರ

Update: 2023-10-18 22:36 IST

ಮಂಗಳೂರು, ಅ.18: ಕುಂದಕನ್ನಡ, ಕೊರಗ ಭಾಷೆ ಸಹಿತ ರಾಜ್ಯದ ಪ್ರತಿಯೊಂದು ಪ್ರಾದೇಶಿಕ ಭಾಷೆಗಳ ಬೆಳವಣಿಗೆಯ ನಿಟ್ಟಿನಲ್ಲಿ ಸರಕಾರ ಅಕಾಡಮಿಯನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಸುಳ್ಯ ಬಂಟಮಲೆ ಅಕಾಡಮಿಯ ಅಧ್ಯಕ್ಷ ಎ.ಕೆ. ಹಿಮಕರ ಅಭಿಪ್ರಾಯಪಟ್ಟಿದ್ದಾರೆ.

ತುಳು ಪರಿಷತ್ ವತಿಯಿಂದ ಮಯೂರಿ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ಸೋಮ ವಾರ ನಡೆದ ಎರಡನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಯಾ ಪ್ರದೇಶದ ಜನರು ಇತಿಮಿತಿಯಲ್ಲಿ ಮಾತೃ ಭಾಷೆಯ ಸಂರಕ್ಷಣೆಗಾಗಿ ಕಾರ್ಯಪ್ರವೃತ್ತರಾಗಬೇಕು. ಜೊತೆಗೆ ಎಲ್ಲಾ ಭಾಷೆಗಳನ್ನು ಗೌರವಿಸುವ ಮನೋಭಾವ ಬೆಳೆಸಬೇಕು. ಎಷ್ಟೋ ಯೋಜನೆಗಳ ಹಣವು ಪೋಲಾಗುವುದರ ಉದಾಹರಣೆ ನಮ್ಮ ಕಣ್ಮುಂದಿದೆ. ಆದರೆ ಸಣ್ಣ ಭಾಷೆಗಳ ಸಂರಕ್ಷಣೆಗಾಗಿ ಅಕಾಡಮಿಗಳ ವತಿಯಿಂದ ವ್ಯಯಿಸಲಾಗುವ ಅನುದಾನವು ವ್ಯರ್ಥವಾಗದು ಎಂದು ಎ.ಕೆ.ಹಿಮಕರ ಹೇಳಿದರು.

ಮುಖ್ಯ ಅತಿಥಿಗಳಾಗಿ ಮ್ಯಾಪ್ಸ್ ಕಾಲೇಜಿನ ಅಧ್ಯಕ್ಷ ದಿನೇಶ್ ಆಳ್ವ, ಮುಂಬೈಯ ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯ ಕಾಂತ್ ಜಯ ಸುವರ್ಣ, ನಿವೃತ್ತ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು, ನಿವೃತ್ತ ಪ್ರಾಧ್ಯಾಪಕ ಡಾ.ಶಿವರಾಮ ಶೆಟ್ಟಿ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಉದ್ಯಮಿ ಕುಸುಮಾ ದೇವಾಡಿಗ, ಮಯೂರಿ ಫೌಂಡೇಶನ್ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಭಾಗವಹಿಸಿದ್ದರು.

ತುಳು ಪರಿಷತ್ ಗೌರವ ಅಧ್ಯಕ್ಷ ಡಾ.ಪ್ರಭಾಕರ ನೀರ್‌ಮಾರ್ಗ ಸ್ವಾಗತಿಸಿದರು, ಕೋಶಾಧಿಕಾರಿ ಶುಭೋದಯ ಆಳ್ವಾ ವಂದಿಸಿದರು. ಡಾ.ವಾಸುದೇವ ಬೆಳ್ಳೆ, ಬೆನೆಟ್ ಅಮ್ಮನ್ನ, ಜಿನೇಶ್ ಪ್ರಸಾದ್ ಸಹಕರಿಸಿದರು. ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.

*ನಿವೃತ್ತ ಉಪನ್ಯಾಸಕಿ ಹಾಗೂ ಲೇಖಕಿ ಡಾ.ಮೀನಾಕ್ಷಿ ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ತುಳು, ಕನ್ನಡ, ಬ್ಯಾರಿ, ಅರೆಭಾಷೆ, ಕುಂದಕನ್ನಡ, ಹವ್ಯಕ ಕನ್ನಡ, ಶಿವಳ್ಳಿ ತುಳು, ಸ್ಥಾನಿಕ ತುಳು, ಕೊರಗ ಭಾಷೆ, ಜಿಎಸ್‌ಬಿ ಕೊಂಕಣಿ, ಕ್ರೈಸ್ತ ಕೊಂಕಣಿ, ಮಲಯಾಳಂ, ಹಿಂದಿ ಸಹಿತ 13 ಭಾಷೆಗಳಲ್ಲಿ 22 ಕವಿಗಳಾದ ಚೆನ್ನಪ್ಪಅಳಿಕೆ, ಯಶವಂತ ಬೋಳೂರು, ಸ್ನೇಹಲತಾ ದಿವಾಕರ್, ಸುಂದರ ಬಾರಡ್ಕ, ಎನ್. ಗಣೇಶ್ ಪ್ರಸಾದ್ ಜೀ, ವಿನೋದ್ ಮೂಡಗದ್ದೆ, ವಿಮಲಾರುಣ, ಬಾಬು ಕೊರಗ ಪಾಂಗಾಳ, ಕೃಷ್ಣ ಡಿ.ಎಸ್. ಶಂಕರನಾರಾಯಣ, ನಾಗರಾಜ ಖಾರ್ವಿ, ಮಂಜುನಾಥ್ ಗುಂಡ್ಮಿ, ಅಕ್ಷತರಾಜ್ ಪೆರ್ಲ, ವಿಜಯ ಲಕ್ಷ್ಮಿಶಾನ್ ಭೋಗ್, ಸುರೇಶ್ ಅತ್ತೂರ್, ರವೀಂದ್ರನ್ ಕಾಸರಗೋಡು, ಮರೋಳಿ ಸಬಿತಾ ಕಾಮತ್, ನವೀನ್ ಪಿರೇರಾ ರೇಮಂಡ್ ಡಿಕುನ್ಹ ತಾಕೋಡೆ, ಹುಸೈನ್ ಕಾಟಿಪಳ್ಳ, ಆಯಿಷಾ ಯು.ಕೆ. ಹಾಗೂ ವಿದ್ಯಾರ್ಥಿಗಳಾದ ದಿಯಾ , ಕರೀನಾ ಶೆಟ್ಟಿ ಕವನಗಳನ್ನು ವಾಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News