×
Ad

ಜು.30ರಂದು ದ.ಕ., ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡಗಳ ಮಹಾಸಂಗಮ

Update: 2023-07-24 22:48 IST

ಮಂಗಳೂರು, ಜು.24: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಧ್ಯೆ ಸಾಮರಸ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಮತ್ತು ಪರಿಶಿಷ್ಟ ಸಮುದಾಯವನ್ನು ಕಾಡುತ್ತಿರುವ ಹಲವಾರು ಮೂಲಭೂತ ಸಮಸ್ಯೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ದ.ಕ ಮತ್ತು ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಾಸಂಗಮ ಮತ್ತು ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಕಾರ್ಯಕ್ರಮ ಜು.30ರಂದು ಬೆಳಗ್ಗೆ 10:00 ಗಂಟೆಯಿಂದ ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕ ಎಂ. ದೇವದಾಸ್ ಅವರು ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಫರೀದ್ ಮತ್ತು ವಿವಿಧ ಗಣ್ಯರಿಗೆ ಗೌರವಾರ್ಪಣೆ ಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಉಭಯ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಕ್ಕಾಗಿ ಮೀಸಲಿರಿಸಿದ ಡಿ.ಸಿ. ಮನ್ನಾ ಭೂಮಿಯ ಮಂಜೂರಾತಿಗಾಗಿ ಸರಕಾರಕ್ಕೆ ಹಲವಾರು ಮನವಿ ಸಲ್ಲಿಸಿ ಚಳವಳಿಗಳನ್ನು ನಡೆಸಿದರೂ ಸರಕಾರವು ಈವರೆಗೆ ನಮ್ಮ ಬೇಡಿಕೆಗೆ ಸ್ಪಂದಿಸಿ ಭೂಮಂಜೂರಾತಿ ನಿಯಮಾವಳಿಗೆ ತಿದ್ದುಪಡಿಗೊಳಿಸಿ ಅರ್ಹ ಅರ್ಜಿದಾರರಿಗೆ ಭೂಮಿ ಮಂಜೂರಾತಿ ಮಾಡುವಲ್ಲಿ ವಿಫಲಗೊಂಡಿದೆ. ನಗರದ ಜ್ಯೋತಿ ವೃತ್ತವನ್ನು ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲು ಸಂಘಟನೆಗಳು ಒತ್ತಾಯಿಸುತ್ತಾ ಬಂದರೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಪರಿಶಿಷ್ಟ ಸಮುದಾಯದ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಮಾಡಲು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡುವ ಅನುದಾನವನ್ನು ಗಣನೀಯ ಕಡಿತಗೊಳಿಸಿರುವುದರಿಂದ ಫಲಾನುಭವಿಗಳಿಗೆ ಸೌಲಭ್ಯ ದೊರಕದೆ ಅವಕಾಶ ವಂಚಿತರಾಗುತ್ತಿದ್ದಾರೆ. ಪರಿಶಿಷ್ಟರ ಹೆಸರಿನಲ್ಲ್ ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ 1ರಲ್ಲಿನ ಮೀನುಗಾರ ಮೊಗೇರರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಂಚಿಸಿದ್ದಾರೆ. ರಾಜ್ಯ ಸರಕಾರವು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಮೀಸಲಾತಿಯ ದುರುಪಯೋಗವನ್ನು ತಡೆಗಟ್ಟಲು ಸಾಧ್ಯವಾಗದೆ ಪರಿಶಿಷ್ಟರಿಗೆ ಇದರಿಂದಾಗಿ ಅನ್ಯಾಯವಾಗಿದೆ. ಹೀಗೆ ಹತ್ತಾರು ಪ್ರಮುಖ ಬೇಡಿಕೆಗಳ ಬಗ್ಗೆ ಸಮಸ್ತ ಪರಿಶಿಷ್ಟ ಸಮುದಾಯ ಪರವಾಗಿ ಸಭೆಯಲ್ಲಿ ಸರಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದು ಎಂ.ದೇವದಾಸ್ ಹೇಳಿದರು.

ದ.ಕ.ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಮಾರಂಭವನ್ನು ಉದ್ಘಾಟಿಸುವರು. ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ ಮಹ ದೇವಪ್ಪ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್, ಮಾಜಿ ಸಚಿವರಾದ ಗಂಗಾಧರ ಗೌಡ, ಆಭಯಂದ್ರ ಜೈನ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್. ಕಾರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ತುಳು ಪರಿಷತ್ ಮಂಗಳೂರು ಇದರ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಉಡುಪಿ ಜಿಲ್ಲಾ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯೂರು, ಮಾಜಿ ಶಾಸಕ ಜೆ.ಆರ್.ಲೋಬೊ, ಕಾಂಗ್ರೆಸ್ ನಾಯಕರಾದ ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಮ್, ಕೃಷ್ಣಪ್ಪ ಜಿ, ಶೇಖರ್ ಕುಕ್ಕೇಡಿ, ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ ಸದಾಶಿವ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ್ ಶೆಟ್ಟಿ ,ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಪಳ್ಳ ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದು ದ.ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಉಪಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ , ಡಿಎಸ್‌ಎಸ್ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರ್, ಸಮನ್ವಯ ಸಮಿತಿಯ ನಾಯಕರಾದ ಗಿರೀಶ್ ಕುಮಾರ್ ಯು.ಕೆ, ಚಂದ್ರ ಕುಮಾರ್, ರಾಮ ಸಮಗಾರ, ಕೃಷ್ಣಪ್ಪ ಬೋಂದೆಲ್, ಪದ್ಮನಾಭ ನರಿಂಗಾನ, ಪದ್ಮನಾಭ ಮೂಡಬಿದ್ರೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News