×
Ad

ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧಗಳ ಬಗ್ಗೆ ತನಗೆ ಮಾಹಿತಿ ಇದೆ ಎಂದ ವ್ಯಕ್ತಿ: ವಕೀಲರ ಹೆಸರಿನ ಪತ್ರ ವೈರಲ್

Update: 2025-06-23 11:52 IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವು ಅಪರಾಧ ಪ್ರಕರಣಗಳ ಬಗ್ಗೆ ವ್ಯಕ್ತಿಯೊಬ್ಬ ಧರ್ಮಸ್ಥಳ ಠಾಣೆಗೆ ಬಂದು ಮಾಹಿತಿ ನೀಡುವುದಾಗಿ ತಮ್ಮಲ್ಲಿ ಹೇಳಿರುವುದಾಗಿ ವಕೀಲರಿಬ್ಬರ ಹೆಸರಿನಲ್ಲಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಗ್ಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

"ಧರ್ಮಸ್ಥಳ ಪೊಲೀಸರು ಈ ಪತ್ರದ ನೈಜತೆಯನ್ನು ಪರಿಶೀಲಿಸಲು ಅದರಲ್ಲಿ ಉಲ್ಲೇಖಿಸಿದ್ದ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಎಂಬವರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ವ್ಯಕ್ತಿಯೋರ್ವ ತಮ್ಮ ಬಳಿ ಬಂದು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಥ ಕೃತ್ಯಗಳ ಬಗ್ಗೆ ತನಗೆ ಮಾಹಿತಿಯಿರುವುದಾಗಿಯೂ, ತಾನು ಧರ್ಮಸ್ಥಳ ಪೊಲೀಸ್ ಠಾಣೆಗೆ ಶರಣಾಗಿ ಮಾಹಿತಿ ನೀಡಲು ಸಿದ್ಧನಿರುವುದಾಗಿ ತಿಳಿಸಿದ್ದಾನೆ ಎಂದು ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಆ ವ್ಯಕ್ತಿಗೆ ಅಗತ್ಯ ಕಾನೂನು ಸುರಕ್ಷತೆಯನ್ನು ಕಲ್ಪಿಸಿದ ಬಳಿಕ ಹಾಜರುಪಡಿಸುವುದಾಗಿ ವಕೀಲರು ಹೇಳಿರುವುದಾಗಿ ಎಸ್ಪಿ ತಿಳಿಸಿದ್ದಾರೆ.

ಸಂಬಂಧಪಟ್ಟ ಆ ವ್ಯಕ್ತಿ ಠಾಣೆಗೆ ಹಾಜರಾಗಿ ಮಾಹಿತಿ ನೀಡಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಆ ಪತ್ರದಲ್ಲಿ ಏನಿದೆ?

ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಎಂಬವರ ಹೆಸರಿನಲ್ಲಿರುವ ಪತ್ರದಲ್ಲಿ, "ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಹತ್ಯೆ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ, ಮೃತದೇಹಗಳನ್ನು ಹೂತು ಹಾಕಿದ್ದ ವ್ಯಕ್ತಿಯೊಬ್ಬ ತನ್ನ ಪಾಪಪ್ರಜ್ಞೆಯನ್ನು ಪರಿಹರಿಸಿಕೊಳ್ಳಲು ಧರ್ಮಸ್ಥಳ ಪೊಲೀಸ್ ಠಾಣೆಗೆ ಕೂಡಲೇ ಹಾಜರಾಗಿ ಶರಣಾಗುವ ನಿರ್ಧಾರ ಮಾಡಿರುತ್ತಾನೆ. ಮತ್ತು ತಾನು ಹೂತು ಹಾಕಿರುವ ಮೃತದೇಹಗಳನ್ನು ಪೋಲೀಸರ ಸಮ್ಮುಖದಲ್ಲಿ ಹೊರತೆಗೆಯುವ ನಿರ್ಧಾರ ಮಾಡಿರುತ್ತಾನೆ. ಇತ್ತೀಚೆಗೆ ಹೊರತೆಗೆದ ಕಳೇಬರವೊಂದುನ್ನು ಪೋಲೀಸರಿಗೆ ಒಪ್ಪಿಸುವುದಾಗಿ ಹೇಳಿದ್ದಾನೆ" ಎಂದು ಉಲ್ಲೇಖಿಸಲಾಗಿದೆ.

'ಸಾರ್ವಜನಿಕರ ಮಾಹಿತಿಗಾಗಿ' ಎಂದು ಬರೆಯಲಾಗಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News