ಸಹೋದರನ ಪುತ್ರನ ಅಂತಿಮ ಸಂಸ್ಕಾರ ಮುಗಿಸಿ ತೆರಳುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ
Update: 2025-05-23 22:57 IST
ಸಾಂದರ್ಭಿಕ ಚಿತ್ರ
ಸುಳ್ಯ: ಕೊಡಗಿನ ಮಾದಾಪುರ ಗ್ರಾಮದಲ್ಲಿ ತನ್ನ ತಮ್ಮನ ಮಗನ ಅಂತಿಮ ಸಂಸ್ಕಾರ ಮುಗಿಸಿ ಊರಿಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರು ಕಲ್ಲುಗುಂಡಿಯಲ್ಲಿ ಹೃದಯಾಘಾತವಾಗಿ ನಿಧನರಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮಾದಪುರದ ಇಬ್ರಾಹಿಂ (90) ಮೃತವ್ಯಕ್ತಿ. ಕಳೆದ ಕೆಲವು ವರ್ಷಗಳಿಂದ ವಿಟ್ಲದಲ್ಲಿ ವಾಸಿಸುತ್ತಿದ್ದರು. ಅವರ ತಮ್ಮನ ಮಗ ಅನಾರೋಗ್ಯದಿಂದ ನಿಧನರಾಗಿದ್ದು, ಮಾದಾಪುರದಲ್ಲಿ ಅಂತಿಮ ಸಂಸ್ಕಾರ ಮುಗಿಸಿ ಅರಂತೋಡಿನಲ್ಲಿರುವ ಅವರ ಪುತ್ರನ ಮನೆಗೆ ಬರುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ಕೆಎಸ್ಅರ್ಟಿಸಿ ಎಕ್ಸ್ ಪ್ರೆಸ್ ಬಸ್ ಅರಂತೋಡು ಭಾಗದಲ್ಲಿ ನಿಲುಗಡೆ ಇಲ್ಲದ ಕಾರಣ ಕಲ್ಲುಗುಂಡಿಯಲ್ಲಿ ಅವರು ಇಳಿದಿದ್ದಾರೆ. ಈ ವೇಳೆ ಅವರಿಗೆ ಹೃದಯದ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರೊಂದಿಗೆ ಇದ್ದ ಕುಟುಂಬದ ಸದಸ್ಯರು ಕಲ್ಲುಗುಂಡಿಯ ಲ್ಯಾಬ್ವೊಂದಕ್ಕೆ ಕರೆದು ಕೊಂಡು ಬರುವ ವೇಳೆ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.