ರಸ್ತೆ ಸುರಕ್ಷತಾ ನಿಯಮಗಳ ಕಟ್ಟು ನಿಟ್ಟಾಗಿ ಪಾಲಿಸಿದರೆ ರಸ್ತೆ ಅಪಘಾತಗಳ ನಿಯಂತ್ರಣ ಸಾಧ್ಯ: ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಝೈಬುನ್ನಿಸಾ
ಮಂಗಳೂರು| 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ
ಮಂಗಳೂರು: ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದಲ್ಲಿ ಹಲವು ರಸ್ತೆ ಅಪಘಾತ ಗಳನ್ನು ತಡೆಗಟ್ಟಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಝೈಬುನ್ನಿಸಾ ತಿಳಿಸಿದ್ದಾರೆ.
ದ.ಕ. ಜಿಲ್ಲಾಡಳಿತ , ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ , ಸಾರಿಗೆ ಇಲಾಖೆ, ಇವರ ಸಹಯೋಗದಲ್ಲಿ ನಗರದ ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026ನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯವು ಕಾನೂನು ರೂಪಿಸುವುದಿಲ್ಲ. ಸರಕಾರ ರೂಪಿಸಿದ ಕಾನೂನನ್ನು ನ್ಯಾಯಾಲಯವು ಜಾರಿಗೆ ತರುತ್ತದೆ.ಯಾವುದೇ ಕಾಯ್ದೆ ಮತ್ತು ನಿಯಮ ಮಾಡಿದಲ್ಲಿ ಅಥವಾ ಹೊರಡಿಸಿದ್ದಲ್ಲಿ ಸಾರ್ವಜನಿಕರಿಗೆ ಅದರ ಅರಿವು ಇರಬೇಕಾಗಿರುವುದು ಅಗತ್ಯ. ಸರಕಾರ ಗಜೆಟ್ ನೋಟಿಫಿಕೇಶನ್ ಹೊರಡಿಸಿದರೆ ಅದರ ಜಾರಿಯಾಗಿದೆ ಎಂದರ್ಥ. ಗಜೆಟ್ ನೋಟಿಫಿಕೇಶನ್ ಹೊರಡಿಸಿದಾಗ ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಸರಕಾರ ಭಾವಿಸುತ್ತಿದೆ. ಆದರೆ ಹೊಸ ಕಾಯ್ದೆ ಅಥವಾ ನಿಯಮದ ಬಗ್ಗೆ ಸರಕಾರ ಅರಿವು ಮೂಡಿಸುವುದಿಲ್ಲ. ಸರಕಾರದ ನಿಯಮ ಮತ್ತು ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ಕಾನೂನು ಸೇವಾ ಪ್ರಾಧಿಕಾರಗಳು ಮಾಡುತ್ತದೆ ಎಂದು ಹೇಳಿದರು.
ಚಾಲಕರು ವಾಹನ ಚಲಾಯಿಸುವ ಮೊದಲು ವಾಹನದ ಸ್ಥಿತಿಯನ್ನು ಪರಿಶೀಲಿಸಬೇಕಾಗಿದೆ. ವಾಹನ ಸುಸ್ಥಿತಿಯಲ್ಲಿ ಇರದಿದ್ದರೆ ಕೆಲವೊಮ್ಮೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಕಿವಿ ಮಾತು ನುಡಿದರು.
ಮುಖ್ಯ ಅತಿಥಿ ಮಂಗಳೂರು ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಖಿ ಮಾತನಾಡಿನಿದರು. ನಮ್ಮ ರಕ್ಷಣೆಗಾಗಿ ಇರುವ ಸಾಧನವಾಗಿದೆ.ಅದನ್ನು ಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ. ಎರಡು ನಿಮಿಷ ಅಜಾಗರೂಕತೆಯಿಂದ ನಾವು ರಸ್ತೆಯಲ್ಲಿ ವಾಹನ ಚಲಾಯಿಸಿದರೆ ನಮಗೆ ಕಷ್ಟವಾಗುವುದು ಮಾತ್ರವಲ್ಲದೆ ನಮ್ಮನ್ನು ಅವಲಂಭಿಸಿದವರಿಗೂ ತೊಂದರೆಯಾಗುತ್ತದೆ. ಎಂದರು.
ಶಿವಮೊಗ್ಗ ಸಾರಿಗೆ ವಿಭಾಗದ ಜಂಟಿ ಆಯುಕ್ತ ಭೀಮನ ಗೌಡ ಪಾಟೀಲ್ ಶುಭ ಹಾರೈಸಿದರು. ಮಂಗಳೂರು ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ(ಪ್ರಭಾರ) ಮುರುಗೇಂದ್ರ ಬಸವರಾಜ ಶಿರೋಳಕರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾರ್ವಜನಿಕರ ಪರವಾಗಿ ಅಶೋಕ್ ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಇಬ್ಬರಿಗೆ ಸಾಂಕೇತಿಕವಾಗಿ ಹೆಲ್ಮೆಟ್ ವಿತರಿಸಲಾಯಿತು.ರಸ್ತೆ ಸುರಕ್ಷತಾ ಮಾಸಾಚರಣೆ ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು.
ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಅಧೀಕ್ಷರಾದ ರಶ್ಮೀ ಸ್ವಾಗತಿಸಿದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.