×
Ad

ಮಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್-ಎಎಸ್ಸೈಗೆ ಬೆದರಿಕೆ ಆರೋಪ; ಪುನೀತ್ ಶೆಟ್ಟಿ ಸೆರೆ

Update: 2023-08-14 21:28 IST

ಪುನೀತ್ ಶೆಟ್ಟಿ

ಮಂಗಳೂರು, ಆ.14: ಕಾರು ಮತ್ತು ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಎಎಸ್ಸೈಗೆ ಬೆದರಿಕೆ ಹಾಕಿದ ಆರೋಪಿ ಶಕ್ತಿನಗರದ ನಿವಾಸಿ ಪುನೀತ್ ಶೆಟ್ಟಿ (35) ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆಯ ವಿವರ: ಕಾರೊಂದು ಬೈಕ್‌ಗೆ ತಾಗಿದ ವಿಚಾರದಲ್ಲಿ ಕಾರು ಚಾಲಕ ಮತ್ತು ಬೈಕ್ ಸವಾರನ ಮಧ್ಯೆ ವಾಗ್ವಾದವಾಗಿದ್ದು, ಸಿಟ್ಟಿನ ಭರದಲ್ಲಿ ಬೈಕ್ ಸವಾರ ಕಾರಿಗೆ ಢಿಕ್ಕಿಪಡಿಸಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವಿಚಾರದಲ್ಲಿ ಉರ್ವ ಠಾಣೆಯ ಎಎಸ್ಸೈಗೆ ಕರೆ ಮಾಡಿದ ಪುನೀತ್ ಶೆಟ್ಟಿ ಆರೋಪಿ ಬೈಕ್ ಸವಾರನನ್ನು ಬಂಧಿಸಲು ಒತ್ತಾಯಿಸಿದ್ದಾನೆ. ಈ ಸಂದರ್ಭ ಎಎಸ್ಸೈ ಸ್ಪಷ್ಟನೆ ನೀಡಿದರೂ ಕೇಳಿಸಿಕೊಳ್ಳದ ಪುನೀತ್ ಶೆಟ್ಟಿ ‘ಆತನನ್ನು ಬಂಧಿಸದಿದ್ದರೆ ಕಮಿಷನರ್‌ಗೆ ಹೇಳಿ ವರ್ಗಾವಣೆ ಮಾಡಿಸುತ್ತೇನೆ’ ಎಂದು ಹೇಳಿದ್ದಲ್ಲದೆ ಸುಮಾರು 8 ನಿಮಿಷಗಳ ಸಂಭಾಷಣೆ ನಡೆಸಿ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಎಎಸ್ಸೈಗೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

ಆರೋಪಿ ವಿರುದ್ಧ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಹಾಗೂ ಫೋನ್ ಮೂಲಕ ಬೆದರಿಕೆ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಆರೋಪಿ ಪುನೀತ್ ಶೆಟ್ಟಿಯ ವಿರುದ್ಧ ಬರ್ಕೆ, ಪಾಂಡೇಶ್ವರ, ಬಂದರು, ಉರ್ವ, ಕಂಕನಾಡಿ ನಗರ ಠಾಣೆಯಲ್ಲಿ ನಾನಾ ಪ್ರಕರಣ ದಾಖಲಾಗಿದೆ. ಈತನ ಕ್ರಿಮಿನಲ್ ಚಟುವಟಿಕೆ ಹಿನ್ನಲೆಯಲ್ಲಿ ರೌಡಿಶೀಟರ್ ಕೂಡಾ ದಾಖಲಾಗಿತ್ತು.

ಪಿಸ್ತೂಲು ಪರವಾನಗಿ ಅಮಾನತಿಗೆ ಸೂಚನೆ: ಕ್ರಿಮಿನಲ್ ಹಿನ್ನಲೆ ಹೊಂದಿರುವ ಪುನೀತ್ ಶೆಟ್ಟಿಯು ಪರವಾನಗಿ ಹೊಂದಿದ್ದ ಪಿಸ್ತೂಲು ಹೊಂದಿದ್ದಾನೆ. ಹಾಗಾಗಿ ಉರ್ವ ಠಾಣೆಯ ಇನ್‌ಸ್ಪೆಕ್ಟರ್ ಭಾರತಿ ಆರೋಪಿಯ ಪಿಸ್ತೂಲು ಪರವಾನಗಿ ರದ್ದು ಮಾಡಲು ಮೇಲಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನ ಕಾರ್ಮಿಕ ಘಟಕವಾದ ಇಂಟಕ್‌ನಲ್ಲಿದ್ದ ಆರೋಪಿ ಪುನೀತ್ ಶೆಟ್ಟಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿ ವರ್ತಿಸಿದ ಆರೋಪದ ಮೇರೆಗೆ ಅಮಾನತುಗೊಂಡಿದ್ದ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News