×
Ad

ಮಂಗಳೂರು: ರೌಡಿಶೀಟರ್ ಆಕಾಶಭವನ ಶರಣ್‌ ಕಾಲಿಗೆ ಗುಂಡೇಟು; ಶೂಟೌಟ್‌ನಲ್ಲಿ ಹೆಡ್ ಕಾನ್‌ಸ್ಟೇಬಲ್‌ಗೂ ಗಾಯ

Update: 2024-01-09 21:57 IST

ಆಕಾಶಭವನ ಶರಣ್‌

ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ ರೌಡಿಶೀಟರ್ ರೋಹಿದಾಸ್ ಕೆ. ಯಾನೆ ಆಕಾಶಭವನ ಶರಣ್‌ನನ್ನು ಮಂಗಳವಾರ ಸಂಜೆ ಶೂಟೌಟ್ ಮಾಡಿ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಜಪ್ಪು ಕುಡ್ಪಾಡಿಯಲ್ಲಿ ಆಕಾಶಭವನ ಶರಣ್‌ನ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಫೈರಿಂಗ್‌ಗೆ ಮೊದಲು ಆರೋಪಿಯು ಚೂರಿಯಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭ ಹೆಡ್‌ಕಾನ್‌ಸ್ಟೆಬಲ್ ಪ್ರಕಾಶ್ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.

ಕೊಲೆ, ಕೊಲೆಯತ್ನ, ಅತ್ಯಾಚಾರ, ಸುಲಿಗೆ ಸಹಿತ 25 ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್ ಶರಣ್ ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದ ದೋಷಿಯಾಗಿದ್ದ. ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.

ಜ.2ರಂದು ನಗರದ ಮೇರಿಹಿಲ್ ಬಳಿ ಪೊಲೀಸರು ಬಂಧಿಸಲು ಯತ್ನಿಸಿದಾಗ ಆರೋಪಿಯು ಪೊಲೀಸರ ವಾಹನಕ್ಕೆ ತನ್ನ ವಾಹನ ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಮಂಗಳವಾರ ಸಂಜೆ ಜಪ್ಪು ಕುಡ್ಪಾಡಿಯಲ್ಲಿ ಈತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಕಾಶಭವನ ಶರಣ್‌ನ ಬಂಧನಕ್ಕೆ ಪೊಲೀಸರು ಸುಮಾರು 15 ದಿನಗಳಿಂದ ಪ್ರಯತ್ನಿಸುತ್ತಿದ್ದರು. ಸೋಮವಾರ ರಾತ್ರಿ ಮಲ್ಪೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಉಳಿದುಕೊಂಡಿದ್ದಾನೆಂಬ ಮಾಹಿತಿ ಲಭಿಸಿತ್ತು. ಅದರಂತೆ ಪೊಲೀಸರು ಅಲ್ಲಿಗೆ ತೆರಳಿದ್ದರು. ಮಂಗಳವಾರ ಬೆಳಗ್ಗೆ ಆತ ಅಲ್ಲಿಂದ ಪರಾರಿಯಾಗಿದ್ದ. ಸಂಜೆಯ ವೇಳೆಗೆ ಮಂಗಳೂರು ಕಡೆಗೆ ಬಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪಂಪ್‌ವೆಲ್ ಬಳಿ ಬಂಧನಕ್ಕೆ ಮುಂದಾದರು. ಅಲ್ಲಿಂದ ತಪ್ಪಿಸಿಕೊಂಡ ಶರಣ್ ಜಪ್ಪು ಕುಡ್ಪಾಡಿ ಕಡೆಗೆ ತನ್ನ ವಾಹನ ತಿರುಗಿಸಿದ. ಅಲ್ಲೇ ಪೊಲೀಸರು ವಾಹನ ಅಡ್ಡಗಟ್ಟಿದಾಗ ಪೊಲೀಸರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ. ಇದರಿಂದ ಹೆಡ್ ಕಾನ್‌ಸ್ಟೆಬಲ್ ಪ್ರಕಾಶ್ ಗಾಯಗೊಂಡರು. ತಕ್ಷಣ ಎಸೈಗಳಾದ ಸುದೀಪ್ ಮತ್ತು ಶರಣಪ್ಪ ಆರೋಪಿಯ ಕಾಲಿಗೆ ಗುಂಡು ಹಾರಿಸಿದರು. ಗಾಯಗೊಂಡ ಹೆಡ್ ಕಾನ್‌ಸ್ಟೆಬಲ್ ಪ್ರಕಾಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ಭೂಗತ ಪಾತಕಿಯೋರ್ವನ ಸಹಚರನಾಗಿದ್ದ ಶರಣ್ ಆತನ ಪರವಾಗಿ ಸುಲಿಗೆ ಮಾಡು ತ್ತಿದ್ದನೆಂಬ ಮಾಹಿತಿ ಇದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

*ಆಕಾಶಭವನ ಶರಣ್‌ಗೆ ಆಶ್ರಯ ನೀಡಿದ ಆರೋಪದ ಮೇರೆಗೆ ಕೋಡಿಕಲ್‌ನ ಶೀಲಾ ಮತ್ತು ಉಡುಪಿ ಸಂತಕಟ್ಟೆಯ ಶರತ್ ಭಂಡಾರಿ ಮತ್ತಾತನ ಪತ್ನಿ ಮಯೂರಿ ಭಂಡಾರಿ, ಧನಂಜಯ ಯಾನೆ ಧನು ಹಾಗೂ ಚೇತನ್ ಯಾನೆ ಬುಳ್ಳ ಎಂಬವರ ವಿರುದ್ಧ ಕಾವೂರು ಠಾಣೆಯಲ್ಲಿ ಮತ್ತು ಶಿಬಿ ಕರ್ಬಿಸ್ಥಾನ ಎಂಬಾತನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ ಆಶ್ರಯ ನೀಡಿದ ಆರೋಪದಲ್ಲಿ 7 ಮಂದಿಯ ವಿರುದ್ಧ 5 ಪ್ರಕರಣ ದಾಖಲಾಗಿದೆ.

ಆಕಾಶಭವನ ಶರಣ್ ವಿರುದ್ಧ ಮಂಗಳೂರು ಮತ್ತು ಉಡುಪಿಯಲ್ಲಿ ಕೊಲೆ, ಕೊಲೆಯತ್ನ, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ, ಹಫ್ತಾ ವಸೂಲಿ ಸೇರಿದಂತೆ 25 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 2 ಅತ್ಯಾಚಾರ, 1 ದರೋಡೆ ಮತ್ತು ಎನ್‌ಡಿಪಿಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಪ್ರಕರಣಗಳು ಸೇರಿವೆ.

2017ರ ಫೆ.8ರಿಂದ ಗೂಂಡಾ ಕಾಯ್ದೆಯಡಿ ಈತನನ್ನು ಬಂಧಿಸಲಾಗಿತ್ತು. 2017ರ ಡಿ.26ರಂದು ಬಿಡುಗಡೆಯಾಗಿದ್ದ. 2020ರ ಅ.20ರಂದು ಸುರೇಂದ್ರ ಬಂಟ್ವಾಳ್‌ನನ್ನು ಜೈಲಿನಲ್ಲಿದ್ದುಕೊಂಡೇ ತನ್ನ ಸಹಚರರಿಂದ ಹತ್ಯೆಗೈದಿದ್ದ. 2022ರ ಕೊನೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. 2023ರ ಜ.14ರಂದು ಸುರತ್ಕಲ್ ಬಳಿ ಸ್ಕೂಟರ್ ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ. ನಾಲ್ಕು ತಿಂಗಳಲ್ಲಿ ಮತ್ತೆ ಜೈಲಿನಿಂದ ಬಿಡುಗಡೆಯಾಗಿ ತಲೆಮರೆಸಿ ಕೊಂಡಿದ್ದ. 2015ರಲ್ಲಿ ಮಂಗಳೂರು ಜೈಲಿನಲ್ಲೇ ವಿಚಾರಣಾಧೀನ ಕೈದಿಯ ಕೊಲೆಯತ್ನ ನಡೆಸಿದ್ದ.

2011ರಲ್ಲಿ ನಡೆದಿದ್ದ ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ರೇಣುಕಾಪ್ರಸಾದ್ ಸೇರಿ 5 ಮಂದಿಗೆ ಹೈಕೋರ್ಟ್ ಕಳೆದ ಅಕ್ಟೋಬರ್‌ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುಪಾರಿ ಪಡೆದು ಕೊಲೆ ಕೃತ್ಯ ನಡೆಸಿದ್ದ ಆಕಾಶ ಭವನ ಶರಣ್ ಕೂಡ ದೋಷಿಯಾಗಿದ್ದ. ಆದರೆ ನ್ಯಾಯಾಲಯಕ್ಕೆ ಗೈರುಹಾಜರಾಗಿ ತಲೆಮರೆಸಿಕೊಂಡಿದ್ದ. ಹಾಗಾಗಿ ಈತನಿಗೆ ಶಿಕ್ಷೆ ಪ್ರಕಟವಾಗಿರಲಿಲ್ಲ.






Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News