×
Ad

ಮಂಗಳೂರು | ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿಗೆ ಬೀಡಿ ಕಾರ್ಮಿಕರ ಮುತ್ತಿಗೆ

Update: 2025-11-29 18:46 IST

ಮಂಗಳೂರು,ನ.29 : ಸುಮಾರು 7 ವರ್ಷದಿಂದ ದುಡಿದರೂ ಸಂಬಳ ನೀಡದ ಬೀಡಿ ಮಾಲಕರ ವಿರುದ್ಧ ಮತ್ತು ಕನಿಷ್ಟ ಕೂಲಿ ಜಾರಿ ಮಾಡದ ಸರಕಾರದ ವಿರುದ್ಧ ಬೀಡಿ ಕಾರ್ಮಿಕರು ನಗರದ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರಾಜ್ಯ ಸರಕಾರ ಅಪರ ಕಾರ್ಮಿಕ ಆಯುಕ್ತ ರವಿಕುಮಾರ್, ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ್, ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯಾ ಸುಲ್ತಾನ್ ಮತ್ತಿತರ ಕಾರ್ಮಿಕ ಅಧಿಕಾರಿಗಳು ಬೀಡಿ ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದರು.

ಎರಡು ವಾರದೊಳಗೆ ಬೀಡಿ ಕಂಪೆನಿಯ ಮಾಲಕರ ಜೊತೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸುವುದಾಗಿ ಬೀಡಿ ಕಾರ್ಮಿಕರ ಸಂಘಟನೆಗಳ ಮುಖಂಡರು ಎಚ್ಚರಿಸಿದರು. ಕಾರ್ಮಿಕ ಇಲಾಖೆಯ ಅಧಿಕಾರಿಗಳ ಭರವಸೆಯ ಮೇರೆಗೆ ಕಳೆದೊಂದು ವಾರದಿಂದ ನಡೆಯುತ್ತಿದ್ದ ಮುಷ್ಕರವನ್ನು ಕಾರ್ಮಿಕರು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದರು.

ಈ ಸಂದರ್ಭ ಮಾತನಾಡಿದ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, 2024ರ ಎಪ್ರಿಲ್ 1ರಿಂದಸರಕಾರದ ಆದೇಶದಂತೆ ಕನಿಷ್ಠ ಕೂಲಿಯನ್ನು ಬೀಡಿ ಮಾಲಕರು ನೀಡದೆ ವಂಚಿಸುತ್ತಿರುವುದು ಖಂಡನೀಯ. ಕಾರ್ಮಿಕರಿಗೆ ಈಗ ಇದ್ದ ವೇತನವನ್ನು ಹಿಮ್ಮುಖಗೊಳಿಸಿ, ಸರಕಾರ ಮಾಲಕರ ಪರವಾಗಿ ಆದೇಶ ಮಾಡಿದ್ದರೂ ಬೀಡಿ ಮಾಲಕರು ಆ ಕೂಲಿಯನ್ನೂ ಕೂಡಾ ಜಾರಿ ಮಾಡದೆ ನಿರಂತರ ಬೀಡಿ ಕಾರ್ಮಿಕರನ್ನು ವಂಚಿಸುತ್ತಾ ಬರುತ್ತಿದ್ದಾರೆ. ಇದನ್ನು ಸಿಐಟಿಯು ಎಂದೂ ಕೂಡ ಸಹಿಸುವುದಿಲ್ಲ ಎಂದರು.

ಬಳಿಕ ಮಾತಾಡಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಸರಕಾರ ನಿಗದಿಗೊಳಿಸಿದ ಕಾನೂನುಬದ್ಧ ವೇತನ, ತುಟ್ಟಿಭತ್ತೆ ಎಲ್ಲವನ್ನೂ ಮಾಲಕರು ವಂಚಿಸುತ್ತಾ ಬಂದಿದ್ದಾರೆ. ಒಂದು ವಾರದೊಳಗೆ ಪ್ರತಿ 1,000 ಬೀಡಿಗೆ 40 ರೂ.ನಂತೆ ಬಾಕಿ ಇರುವ ವೇತನ ಪಾವತಿಸದಿದ್ದರೆ ಡಿ.8ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ದ.ಕ.ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಸುಕುಮಾರ್ ಮಾತನಾಡಿ, ಹಲವು ಹೋರಾಟಗಳಿಂದ ಪಡೆದ ಕಾನೂನು ಸೌಲಭ್ಯಗಳನ್ನು ಈ ರೀತಿ ವಂಚಿಸಲು ಸಿಐಟಿಯು ಅವಕಾಶ ಕೊಡುವುದಿಲ್ಲ ಎಂದರು.

ಈ ಸಂದರ್ಭ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಐಟಿಯು ಮುಖಂಡರಾದ ವಸಂತ ಆಚಾರಿ, ಜಯಂತಿ ಬಿ.ಶೆಟ್ಟಿ, ಈಶ್ವರಿ ಪದ್ಮುಂಜ ಮಾತನಾಡಿದರು.

ಪದ್ಮಾವತಿ ಶೆಟ್ಟಿ, ವಸಂತಿ ಕುಪ್ಪೆಪದವು, ಜಯಂತ್ ನಾಯ್ಕ, ಲೋಲಾಕ್ಷಿ, ಭಾರತಿ ಬೋಳಾರ, ಜಯಶ್ರೀ ಬೆಳ್ತಂಗಡಿ, ಗಿರಿಜಾ ಮೂಡುಬಿದಿರೆ, ಲಕ್ಷ್ಮಿ, ಜಯಲಕ್ಷ್ಮಿ, ಸಿಐಟಿಯು ದ.ಕ. ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ನೋಣಯ್ಯ ಗೌಡ, ಹೊನ್ನಯ ಅಮೀನ್, ಭವಾನಿ, ಉದಯ ಕುಮಾರ್, ಚಂದ್ರಪೂಜಾರಿ, ಕವಿರಾಜ್, ಸುನೀತಾ, ಉಮೇಶ್ ಕುಂದರ್, ಬಲ್ಕಿಸ್, ಕೆ. ಯಾದವ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಪ್ರಮೋದಿನಿ ಮತ್ತಿತರರು ಹೋರಾಟದ ನೇತೃತ್ವ ವಹಿಸಿದ್ದರು.

ಫೆಡರೇಶನ್ ನ ಕೋಶಾಧಿಕಾರಿ ಸದಾಶಿವ ದಾಸ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News