×
Ad

ಮಂಗಳೂರು | ಕೆಂಪುಕಲ್ಲು- ಮರಳು ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಬಿಜೆಪಿ ಧರಣಿ

Update: 2025-09-16 15:54 IST

ಮಂಗಳೂರು, ಸೆ.16: ದ.ಕ. ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಕೆಂಪು ಕಲ್ಲು, ಮರಳು, ಖಾಲಿ ಚಟ್ಟಿ, ಗಾರೆಗಳನ್ನು ಪ್ರದರ್ಶಿಸುವ ಮೂಲಕ ಮಂಗಳವಾರ ಪ್ರತಿಭಟನಾ ಧರಣಿ ನಡೆಯಿತು.

ಮಂಗಳೂರಿನ ಮಿನಿ ವಿಧಾನಸೌಧ ಎದುರು ನಡೆದ ಧರಣಿ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು, ಸ್ಪೀಕರ್ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಮಾತನಾಡಿದ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಕರಾವಳಿ ಹಿಂದುತ್ವದ ಭದ್ರಕೋಟೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರದಿಂದ ಕೆಂಪು ಕಲ್ಲು ಮತ್ತು ಮರಳಿನ ಕೃತಕ ಅಭಾವ ಸೃಷ್ಟಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಪೀಕರ್‌ಗೆ ಇಲ್ಲಿನ ಜ್ವಲಂತ ಸಮಸ್ಯೆ ಗೊತ್ತಿದ್ದರೂ ಸಮಸ್ಯೆಗೆ ಪರಿಹಾರ ಹುಡುಕು ಕೆಲಸ ಆಗಿಲ್ಲ. ಬಿಜೆಪಿ ಶಾಸಕರು, ಸಂಸದರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎರಡು ವಾರ ಕಳೆದರೂ ಸರ್ಕಾರದಿಂದ ಸ್ಪಂದನ ಸಿಕ್ಕಿಲ್ಲ. ಕೆಂಪು ಕಲ್ಲು ಮತ್ತು ಮರಳುಗಾರಿಕೆಯ ನಿಯಮ ಸರಳೀಕೃತಗೊಳಿಸಲು ಇನ್ನು ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದ ಅವರು, ಈ ಎಲ್ಲ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಹಿತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಪೀಕರ್ ಯು.ಟಿ.ಖಾದರ್ ನೇರ ಜವಾಬ್ದಾರಿ ಎಂದು ಆರೋಪಿಸಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕೆಂಪು ಕಲ್ಲು ಮತ್ತು ಮರಳಿನ ಸಮಸ್ಯೆಯಿಂದಾಗಿ ಕಾರ್ಮಿಕರು ಕೆಲಸ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಆಗಮಿಸಿದರೂ ಶಾಸಕರ ಸಭೆ ಕರೆದಿಲ್ಲ. ಹಾಗಾಗಿ ಮಂಗಳೂರಿನಿಂದ ಬಿ.ಸಿ.ರೋಡ್, ಸುಳ್ಯಕ್ಕೆ ಪಾದಯಾತ್ರೆ ನಡೆಸುವುದಾಗಿ ಹೇಳಿದರು.

ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಹಿಂದುತ್ವದ ಗಟ್ಟಿನೆಲ ಕರಾವಳಿಯಲ್ಲಿ ಕಾರ್ಯಕರ್ತರ ಕೊಲೆ, ಗೋಕಳ್ಳತನದಿಂದ ತೊಡಗಿ ಈಗ ಕೆಂಪು ಕಲ್ಲು, ಮರಳು ಕೊರತೆವರೆಗೆ ಸರ್ಕಾರದಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸ್ಪೀಕರ್ ಅವರು ಜಿಲ್ಲೆಯ ಕಾರುಭಾರು ನಡೆಸುತ್ತಿದ್ದರೂ, ಈ ಸಮಸ್ಯೆಯನ್ನು ಸರಿಪಡಿಸುವ ಬದಲು ಉಲ್ಭಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕರಾವಳಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ಕೆಂಪು ಕಲ್ಲು, ಮರಳು ಕಟ್ಟಡ ಕಾಮಗಾರಿಗಳಿಗೆ ಸಿಗುತ್ತಿಲ್ಲ. ಇಲ್ಲಿ ಕೆಂಪು ಕಲ್ಲು ಬಳಸಿಯೇ ಕಾಮಗಾರಿ ನಡೆಸುವುದರಿಂದ ಈಗ ಕಾರ್ಮಿಕರೂ ಕೆಲಸ ಇಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಬಿಜೆಪಿ ನಿಯೋಗ ಸರ್ಕಾರದ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರ ದೊರಕಿಲ್ಲ ಎಂದು ಹೇಳಿದರು.

ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಭಾಗೀರಥಿ, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕರಾದ ಕ್ಯಾ.ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ಸಂಜಯ ಪ್ರಭು, ರಮೇಶ್ ಕಂಡೆಟ್ಟು, ಪೂರ್ಣಿಮಾ, ವಿಹಿಂಪ ಮುಖಂಡ ಪುರುಷೋತ್ತಮ, ಮತ್ತಿತರರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News