×
Ad

ಮಂಗಳೂರು | ಬಾಲ್ಯವಿವಾಹ ಕಂಡುಬಂದರೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ತಹಶೀಲ್ದಾರ್ ಸೂಚನೆ

Update: 2025-11-21 18:45 IST

ಮಂಗಳೂರು, ನ.21: ಬಾಲ್ಯವಿವಾಹ ಮತ್ತು ಪೊಕ್ಸೊ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮಂಗಳೂರು ತಹಶೀಲ್ದಾರ್ ಟಿ. ರಮೇಶ್ ಬಾಬು ಸೂಚಿಸಿದ್ದಾರೆ.

ಮಂಗಳೂರು ತಾಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ತಾಲೂಕು ಮಟ್ಟದ ವಿವಿಧ ಯೋಜನೆಗಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಬೇಟಿ ಬಚಾವೋ, ಬೇಟಿ ಪಡಾವೋ, ಪೊಕ್ಸೊ, ಬಾಲ್ಯವಿವಾಹ, ಮಕ್ಕಳ ನಾಪತ್ತೆ ಸೇರಿದಂತೆ ಇತರೆ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಕೆಲಸ ನಿರ್ವಹಿಸಬೇಕು ಎಂದು ಟಿ. ರಮೇಶ್ ಬಾಬು ಹೇಳಿದರು.

ಮಾದಕ ಮತ್ತು ವ್ಯಸನ ನಿಷೇಧ ಯೋಜನೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಮಿತಿ, ಭಾಗ್ಯಲಕ್ಷ್ಮಿ ಯೋಜನೆಯ ಕಾರ್ಯಪಡೆ ಸಮಿತಿ, ಅಂಗವಿಕಲ ಕುಂದು ಕೊರತೆ ನಿವಾರಣೆ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಮಾರಾಟ ಹಾಗೂ ಸಾಗಾಟ ತಡೆ ಸಮಿತಿ, ಬಾಲ್ಯವಾಹ ನಿಷೇಧ ಸಮಿತಿ, ಮಕ್ಕಳ ರಕ್ಷಣಾ ಸಮಿತಿ, ಬೇಟಿ ಬಚಾವೋ ಬೇಟಿ ಪಡಾವೋ ಸಮಿತಿ, ಮಾತೃವಂದನ ಯೋಜನೆ ಸಮಿತಿಯ ಪ್ರಗತಿಯನ್ನು ಅವರು ಪರಿಶೀಲಿಸಿದರು.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ 2025ರ ಎಪ್ರಿಲ್ನಿಂದ ಅಕ್ಟೋಬರ್ ವರೆಗೆ 16 ಪ್ರಕರಣಗಳು ದಾಖಲಾಗಿದೆ. ಮಂಗಳೂರು ಶಿಶು ಅಭಿವೃದ್ಧಿ ಯೋಜನ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ವಲಯ ಸಭೆ ಹಾಗೂ ಅಂಗನವಾಡಿಗಳಲ್ಲಿ ತಾಯಂದಿರ ಸಭೆ ಮತ್ತು ಸ್ತ್ರೀಶಕ್ತಿ ಸಭೆಗಳಲ್ಲಿ ಸೇರಿದ ಮಹಿಳೆಯರಿಗೆ ಮಾದಕ ವಸ್ತು ಸೇವನೆ ಮತ್ತು ಮಾರಾಟ ನಿಷೇಧದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮಂಗಳೂರು ತಾಪಂ ಇಒ ಮಹೇಶ್ ಹೊಳ್ಳ, ಪೋಲಿಸ್ ನಿರೀಕ್ಷಕ ಗುರುರಾಜ್, ಮಂಗಳೂರು (ಗ್ರಾಮಾಂತರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಗಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News