ಮಂಗಳೂರು | ಡಿ.14ರಂದು ‘ಮಣೇಲ್ ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರ ಸಂಕಿರಣ
ಮಂಗಳೂರು, ಡಿ.11: ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ತಾಲೂಕಿನ ಗಂಜಿಮಠ ಗ್ರಾ.ಪಂ. ವ್ಯಾಪ್ತಿಯ ಮಳಲಿಯ ದ.ಕ. ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ರಾಣಿ ಅಬ್ಬಕ್ಕನ ಕುರಿತಾಗಿ ‘ಮಣೇಲ್ ದ ಪೆರ್ಮೆ ರಾಣಿ ಅಬ್ಬಕ್ಕ’ ಎಂಬ ವಿಚಾರ ಸಂಕಿರಣವನ್ನು ಸ್ಥಳೀಯ ರಾಣಿ ಅಬ್ಬಕ್ಕ ಚಾವಡಿಯ ಸಹಭಾಗಿತ್ವದಲ್ಲಿ ಡಿ.14ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.
ಗುರುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ವಿಚಾರಗೋಷ್ಠಿ ಉದ್ಘಾಟನೆಗೆ ಮೊದಲು ಬೆಳಗ್ಗೆ 9.30ಕ್ಕೆ ಶ್ರೀ ಅನಂತ ಸ್ವಾಮಿ ಬಸದಿಯಿಂದ ವಿಚಾರಗೋಷ್ಠಿ ನಡೆಯುವ ಮಳಲಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣ ತನಕ ಸಾಂಸ್ಕೃತಿಕ ನಡಿಗೆ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಉದ್ಘಾಟಿಸುವರು ಎಂದರು.
ಅಬ್ಬಕ್ಕನ ಕುರಿತಾಗಿ ನಡೆಯುವ ಗೋಷ್ಠಿಯಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ‘ಅಬ್ಬಕ್ಕ ಚಾರಿತ್ರಿಕ ಅವಲೋಕನ’ ವಿಷಯದ ಬಗ್ಗೆ ಹಾಗೂ ಇತಿಹಾಸ ತಜ್ಞ ಡಾ.ಪುಂಡಿಕಾಯಿ ಗಣಪಯ್ಯ ಭಟ್ ‘ಮಣೇಲಿನಲ್ಲಿ ಪ್ರವಾಸಿ ಪಿಯಾತ್ರೋ ದಲ್ಲಾವೆಲ್ಲೆ ಕಂಡ ಅಬ್ಬಕ್ಕ’ ವಿಷಯದ ಬಗ್ಗೆ ಉಪನ್ಯಾಸ ನೀಡುವರು.
ವಿಚಾರಗೋಷ್ಠಿಯಲ್ಲಿ ಮಂಡಿಸಲ್ಪಡುವ ಚಾರಿತ್ರಿಕ ವಿಷಯಗಳ ಆಶಯದಂತೆ ಮುಂದಿನ ದಿನಗಳಲ್ಲಿ ಅಬ್ಬಕ್ಕರಾಣಿಯ ಚಿತ್ರವನ್ನು ಸ್ಥಳೀಯ ಶಾಲೆಯ ಹಾಗೂ ಕಟ್ಟೆಮಾರು ಮನೆಯ ಆವರಣಗೋಡೆಯಲ್ಲಿ ಜಿಲ್ಲೆಯ ಹಿರಿಯ ಕಲಾವಿದರು ಚಿತ್ರಿಸುವ ಯೋಜನೆಯನ್ನು ಹೊಂದಲಾಗಿದೆ. ವಿವಿಧ ಗಣ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ಬೂಬ ಪೂಜಾರಿ ಮಳಲಿ, ಅಕ್ಷಯ ಆರ್. ಶೆಟ್ಟಿ, ನಿವೃತ್ತ ಪ್ರಾಂಶುಪಾಲ, ಮಣೇಲ್ ಗ್ರಾಮಸ್ಥ ಪ್ರೊ. ಅಕ್ಷಯ ಕುಮಾರ್ ಮಳಲಿ, ಮಣೇಲ್ ಗ್ರಾಮಸ್ಥ ಪುರಂದರ ಕುಲಾಲ್ ಉಪಸ್ಥಿತರಿದ್ದರು.