×
Ad

ಮಂಗಳೂರು | ಸರಕಾರಿ ಶಾಲಾ ಮಕ್ಕಳ ಸಬಲೀಕರಣಕ್ಕೆ ‘ಡ್ರೀಮ್ಸ್ ಆನ್ ವೀಲ್ಸ್’ : ರಾಜ್ಯದಾದ್ಯಂತ 5,500 ಕಿ.ಮೀ ಬೈಕ್ ಯಾತ್ರೆ

Update: 2025-11-22 17:44 IST

ಮಂಗಳೂರು, ನ.22: ಸರಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಅವರನ್ನು ಭವಿಷ್ಯದ ಶೈಕ್ಷಣಿಕ ಸವಾಲುಗಳಿಗೆ ಸಜ್ಜುಗೊಳಿಸಲು ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಅಭಿಯಾನ ‘ಡ್ರೀಮ್ಸ್ ಆನ್ ವೀಲ್ಸ್’ ನ.24ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭಗೊಳ್ಳಲಿದೆ.

ಮಾಜಿ ಪತ್ರಕರ್ತ ಹಾಗೂ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್’ ಎನ್‌ಜಿಒದ ಸಹ-ಸಂಸ್ಥಾಪಕರಾದ ಶ್ರೀನಿವಾಸನ್ ನಂದಗೋಪಾಲ್ ಅವರು ಈ ವಿಶಿಷ್ಟ ಸಾಹಸಯಾತ್ರೆಯನ್ನು ಕೈಗೊಂಡಿದ್ದು, ತಮ್ಮ ಬೈಕ್ ಮೂಲಕ ರಾಜ್ಯದಾದ್ಯಂತ ಏಕಾಂಗಿಯಾಗಿ ಸಂಚರಿಸಲಿದ್ದಾರೆ.

ಅಭಿಯಾನದ ಉದ್ದೇಶ :

ವಿಶೇಷವಾಗಿ 10ನೇ ತರಗತಿಯ ಸರಕಾರಿ ಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಿಯುಸಿ ಹಂತವನ್ನು ತಲುಪುವಾಗ ಎದುರಿಸುವ ಆತ್ಮವಿಶ್ವಾಸದ ಕೊರತೆಯನ್ನು ನೀಗಿಸುವುದು, ಪರೀಕ್ಷಾ ಭಯವನ್ನು ಹೋಗಲಾಡಿಸುವುದು ಮತ್ತು ಸೂಕ್ತ ವೃತ್ತಿ ಮಾರ್ಗಗಳ ಬಗ್ಗೆ ಅರಿವು ಮೂಡಿಸುವುದು ಈ ಅಭಿಯಾನದ ಮುಖ್ಯ ಧ್ಯೇಯವಾಗಿದೆ.

ಯಾತ್ರೆಯ ಹಾದಿ ಮತ್ತು ವಿಶೇಷತೆ :

ನಂದಗೋಪಾಲ್ ಅವರು ತಮ್ಮ ಹೋಂಡಾ ಸಿಬಿ350 ಬೈಕ್‌ನಲ್ಲಿ ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ, ಆಯ್ದ ಶಾಲೆಗಳು ಅಥವಾ ಕ್ಲಸ್ಟರ್‌ಗಳಲ್ಲಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಿದ್ದಾರೆ.

ದಕ್ಷಿಣ ಕನ್ನಡದಿಂದ ಆರಂಭವಾಗಿ ರಾಜ್ಯದ ಎಲ್ಲಾ 31 ಜಿಲ್ಲೆಗಳ ಮೂಲಕ ಹಾದುಹೋಗಲಿರುವ ಈ ಯಾತ್ರೆ, ಅಂತಿಮವಾಗಿ ರಾಜಧಾನಿ ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.

ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು, ಬಯಲು ಸೀಮೆ ಹಾಗೂ ದಕ್ಷಿಣ ಭಾಗಗಳನ್ನು ಒಳಗೊಂಡಂತೆ ರಾಜ್ಯದ ಭೌಗೋಳಿಕ ವೈವಿಧ್ಯತೆಯನ್ನು ಬೆಸೆಯುವಂತೆ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಯಾತ್ರೆಯು ಕೇರಳ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳ ಗಡಿ ಭಾಗಗಳನ್ನೂ ಸ್ಪರ್ಶಿಸಲಿದೆ. ಒಟ್ಟು 5,500ಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ಈ ರಸ್ತೆ ಪ್ರವಾಸದ ಮೂಲಕ ಕ್ರಮಿಸಲಾಗುವುದು ಎಂದು ನಂದ ಗೋಪಾಲ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶೈಕ್ಷಣಿಕ ವ್ಯವಸ್ಥೆಯ ಅಧ್ಯಯನ :

ಕೇವಲ ತರಗತಿಗಳನ್ನು ನಡೆಸುವುದಕ್ಕೆ ಸೀಮಿತವಾಗದೆ, ರಾಜ್ಯದ ಗ್ರಾಮೀಣ, ಅರೆ-ನಗರ ಮತ್ತು ದುರ್ಗಮ ಪ್ರದೇಶಗಳ ಸರ್ಕಾರಿ ಶಾಲೆಗಳ ವಾಸ್ತವ ಸ್ಥಿತಿಗತಿಯನ್ನು ದಾಖಲಿಸುವುದು ನನ್ನ  ಉದ್ದೇಶವಾಗಿದೆ. ಅಲ್ಲಿನ ಶೈಕ್ಷಣಿಕ ಮೂಲಸೌಕರ್ಯ ಮತ್ತು ಶಿಕ್ಷಕರ ದಕ್ಷತೆಯ ಬಗ್ಗೆ ಅಧ್ಯಯನ ನಡೆಸಿ, ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಸರ್ಕಾರವು ತೆಗೆದುಕೊಳ್ಳಬೇಕಾದ ಪೂರ್ವಭಾವಿ ಕ್ರಮಗಳ ಬಗ್ಗೆ ಗಮನ ಸೆಳೆಯಲು ಈ ಯಾತ್ರೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News