ಮಂಗಳೂರು | ಫಾತಿಮಾ ಫೌಂಡೇಶನ್ ವತಿಯಿಂದ ಡಾ.ಯೂಸುಫ್ ಕುಂಬ್ಳೆಗೆ ಸನ್ಮಾನ
ಮಂಗಳೂರು, ನ.29: ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಫಾತಿಮಾ ಫೌಂಡೇಶನ್ ವತಿಯಿಂದ ಇಂಡಿಯಾನ ಆಸ್ಪತ್ರೆಯ ಮುಖ್ಯಸ್ಥ ಮತ್ತು ಹೃದ್ರೋಗ ತಜ್ಞ ಡಾ.ಯೂಸುಫ್ ಕುಂಬ್ಳೆ ಅವರನ್ನು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಇಂಡಿಯಾನ ಆಸ್ಪತ್ರೆಯ ಚೇರ್ಮ್ಯಾನ್ ಪ್ರೊ.ಅಲಿ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು.
ಅಭಿನಂದನಾ ಭಾಷಣಗೈದ ಲಯನ್ಸ್ ಜಿಲ್ಲಾ ಮಾಜಿ ಉಪ ರಾಜ್ಯಪಾಲ ಎಂ.ಬಿ.ಸದಾಶಿವ, ಹೃದ್ರೋಗ ತಜ್ಞ ಡಾ.ಯೂಸುಫ್ ಕುಂಬ್ಳೆ ಮಂಗಳೂರಿನಲ್ಲಿ ವಿಶ್ವದರ್ಜೆಯ ಸೂಪರ್ ಸ್ಪೆಷಾಲಿಟಿ ಹಾರ್ಟ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಿದ್ದರಿಂದ ಕಾರ್ಪೊರೇಟ್ ಆಸ್ಪತ್ರೆಗಳು ಮಂಗಳೂರಿಗೆ ಬರಲಿಲ್ಲ. ಯೂಸುಫ್ ಅವರು 2002ರಲ್ಲಿ ದೆಹಲಿಯ ಏಮ್ಸ್ನಿಂದ ಪದವಿ ಪಡೆದ ಪ್ರಥಮ ಮುಸ್ಲಿಂ ಕಾರ್ಡಿಯೋಲಜಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 2006ರಲ್ಲಿ ಕರ್ನಾಟಕ ರಾಜ್ಯದ ಪ್ರಥಮ ರೇಡಿಯಲ್ ಆರ್ಟರಿ ಅಂಜಿಯೋಪ್ಲಾಸ್ಟಿ ನಿರ್ವಹಿಸಿದರು. 25,000 ರೇಡಿಯಲ್ ಅಂಜಿಯೋಪ್ಲಾಸ್ಟಿ ನಿರ್ವಹಿಸಿರುವ ಯೂಸುಫ್ ಕುಂಬ್ಳೆ ವೈದ್ಯಕೀಯ ಕ್ಷೇತ್ರದ ಆಜಾತ ಶತ್ರು ಎಂದು ಬಣ್ಣಿಸಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸುಡ) ಅಧ್ಯಕ್ಷ ಕೆ.ಎಂ.ಮುಸ್ತಫ, ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಪ್ರದಾನ ಕಾರ್ಯದರ್ಶಿ ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಸನ್ಮಾನ ನೆರವೇರಿಸಿದರು.
ಈ ಸಂದರ್ಭ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಭಗವಾನ್ ಬಿ.ಸಿ., ಮಂಗಳೂರಿನ ಹಿರಿಯ ಹೃದ್ರೋಗ ತಜ್ಞ ಡಾ.ಆರ್.ಎಲ್.ಕಾಮತ್, ಕಣಚೂರು ಮೆಡಿಕಲ್ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ.ಮುಹಮ್ಮದ್ ಇಸ್ಮಾಯಿಲ್, ಇಂಡಿಯಾನ ಆಸ್ಪತ್ರೆಯ ನಿರ್ದೇಶಕರಾದ ಡಾ.ನಿಹಾಲ್ ಅಲಿ ಕುಂಬ್ಳೆ, ಡಾ. ಅಪೂರ್ವ, ಜಯದೇವ್, ಆಡಳಿತ ವಿಭಾಗದ ನಿರ್ದೇಶಕ ಡಾ.ಆದಿತ್ಯ ಭಾರದ್ವಾಜ್ ಉಪಸ್ಥಿತರಿದ್ದರು.