ಮಂಗಳೂರು | ಡಿ.9ರಂದು ಬೇಡಿಕೆ ಈಡೇರಿಕೆ ಆಗ್ರಹಿಸಿ ಗ್ರಾ.ಪಂ. ಸ್ವಚ್ಛತಾ ಪೌರ ಕಾರ್ಮಿಕರಿಂದ ಕಾಲ್ನಡಿಗೆ ಜಾಥಾ
ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.4: ದ.ಕ. ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಸಂಜೀವಿನಿ ಒಕ್ಕೂಟ ಗುತ್ತಿಗೆದಾರರ ಮೂಲಕ ದುಡಿಯುತ್ತಿರುವ ಸ್ವಚ್ಛತಾ ಪೌರಕಾರ್ಮಿಕರು ಡಿ.9ರಂದು ತಮ್ಮ ಕೆಲಸ ಸ್ಥಗಿತಗೊಳಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೇಡಿಹಿಲ್ ನ ಪತ್ರಿಕಾ ಭವನದ ಬಳಿಯಿಂದ ಜಿಲ್ಲಾ ಪಂಚಾಯತ್ ತನಕ ಕಾಲ್ನಡಿಗೆ ಜಾಥಾ ನಡೆಸಲಿರುವರು ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತಿಳಿಸಿದ್ದಾರೆ.
ನಗರದ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಲೇಡಿಹಿಲ್ ನ ಪತ್ರಿಕಾ ಭವನದ ಬಳಿಯಿಂದ ಬೆಳಗ್ಗೆ 10ಗಂಟೆಗೆ ಕಾಲ್ನಡಿಗೆ ಜಾಥಾ ಹೊರಟು ಜಿಲ್ಲಾ ಪಂಚಾಯತ್ ಕಚೇರಿ ತನಕ ಸಾಗಿ ಅಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಸ್ವಚ್ಛತಾ ಪೌರಕಾರ್ಮಿಕರು 8 ವರ್ಷಗಳಿಂದ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ಗಳಲ್ಲಿ ಕನಿಷ್ಠ ವೇತನವಿಲ್ಲದೆ, ಇಎಸ್ಐ, ಪಿಎಫ್, ಮಾಸ್ಕ್ , ಗ್ಲೌಸ್, ಆರೋಗ್ಯ ಕಾರ್ಡ್, ವೈದ್ಯಕೀಯ ತಪಾಸಣೆ ಮತ್ತಿತರ ಸೌಭಲ್ಯಗಳಿಲ್ಲದೆ ದಿನಕ್ಕೆ ಕೇವಲ 300 ರೂ.ಗಳಿಗೆ ದುಡಿಯುತ್ತಿದ್ದಾರೆ. ಅವರಿಗೆ ತಿಂಗಳು ಪೂರ್ತಿ ಕೆಲಸ ನೀಡದೆ ಶೋಷಣೆ ಮತ್ತು ದಬ್ಬಾಳಿಕೆ ನಿರಂತರ ನಡೆಯುತ್ತಿದೆ ಎಂದು ಅವರು ಹೇಳಿದರು.
ಸ್ವಚ್ಛತಾ ಪೌರಕಾರ್ಮಿಕ-ಪೌರಕಾರ್ಮಿಕೆಯರನ್ನು ಮತ್ತು ಸ್ವಚ್ಛತಾ ವಾಹನ ಚಾಲಕರನ್ನು ನೇರನೇಮಕಾತಿ, ನೇರಪಾವತಿ ಅಡಿಯಲ್ಲಿ ತಂದು ಅವರನ್ನು ಖಾಯಂ ಸ್ವಚ್ಛತಾ ಪೌರಕಾರ್ಮಿಕರಾಗಿ ಮತ್ತು ಸ್ವಚ್ಛತಾ ವಾಹನ ಚಾಲಕರಾಗಿ ನೇಮಕ ಮಾಡಬೇಕು ಎಂದು ಹೇಳಿದರು.
ಸ್ವಚ್ಛತಾ ಪೌರಕಾರ್ಮಿಕ ಪೌರಕಾರ್ಮಿಕೆಯರುಗಳಿಗೆ ಮತ್ತು ಸ್ವಚ್ಛತಾ ವಾಹನ ಚಾಲಕರಿಗೆ ಸರಕಾರದ ಆದೇಶದಂತೆ ಎಲ್ಲ ಸವಲತ್ತುಗಳನ್ನು ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ಪಿ. ಆನಂದ, ಸಂಘದ ಧುರೀಣರಾದ ಪೌಲಿನ್ ಮೊಂತೆರೊ, ದೀಪ್ತಿ ಎಂ, ಹೇಮಾ ವಿ, ರೇಣುಕಾ ಮತ್ತು ವಿನೋದ ಉಪಸ್ಥಿತರಿದ್ದರು.