ಮಂಗಳೂರು: ಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕಾಗಿ ಅನಿರ್ದಿಷ್ಟಾವಧಿ ಧರಣಿ
ಮಂಗಳೂರು: ಕೇಂದ್ರ ಸರಕಾರವು ಬಿಸಿಯೂಟ ನೌಕರರಿಗೆ ವೇತನ ಹೆಚ್ಚಿಸಬೇಕು ಮತ್ತು ಕನಿಷ್ಠ ಕೂಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ನಗರದ ಮಿನಿ ವಿಧಾನಸೌಧದ ಮುಂದೆ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಬಿಸಿಯೂಟ ನೌಕರರು ಧರಣಿ ಸತ್ಯಾಗ್ರಹ ನಡೆಸಿದರು.
ಬದುಕು ನಡೆಸಲು ಪೂರಕವಾದ ಕನಿಷ್ಠ ಕೂಲಿಯನ್ನು ನೀಡದೆ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರ ಜೆ. ಬಾಲಕೃಷ್ಣ ಶೆಟ್ಟಿ ಅತ್ಯಂತ ನಿಕೃಷ್ಠವಾಗಿ ಕೂಲಿಯನ್ನು ಪಡೆದು, ದಮನೀಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಬಿಸಿಯೂಟ ನೌಕರರಿಗೆ ಪ್ರಸಕ್ತ ಸಿಗುತ್ತಿರುವ 4,500 ರೂ. ವೇತನದಿಂದ ಬದುಕು ಸಾಗಿಸಲು ಸಾಧ್ಯವಿಲ್ಲ. ಗೌರವಧನದ ಹೆಸರಿನಲ್ಲಿ ಅಗೌರವ ತೋರಿಸುತ್ತಾ ಬಿಸಿಯೂಟ ನೌಕರೆಯರನ್ನು ಕೀಳಾಗಿ ಕಾಣುವ ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕೆಂದು ಕರೆ ನೀಡಿದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, 2001ರಲ್ಲಿ ಜಾರಿಗೆ ಬಂದ ಬಿಸಿಯೂಟ ಯೋಜನೆಗೆ 2014ರಲ್ಲಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ನಿರಂತರವಾಗಿ ತನ್ನ ಪಾಲನ್ನು ಕಡಿತಗೊಳಿಸುತ್ತಾ ಬಂದಿದೆ. ದೇಶಾದ್ಯಂತ 26ಕ್ಕೂ ಮಿಕ್ಕಿದ ಬಿಸಿಯೂಟ ನೌಕರರು, ಸರಕಾರದ ಆದೇಶದಲ್ಲಿ 4 ಗಂಟೆಯ ಕೆಲಸವೆಂದು ಹೇಳಿದ್ದರೂ 8 ಗಂಟೆಯಷ್ಟು ದುಡಿಯುತ್ತಿದ್ದಾರೆ. ಆದರೆ ಸರಕಾರಗಳು ಮಾತ್ರ ದಿವ್ಯಮೌನ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿ ಮುಂದಿನ ಬಜೆಟ್‌ನಲ್ಲಿ ಕನಿಷ್ಠ ವೇತನ ಜಾರಿಯಾಗಬೇಕು, ಯಾವುದೇ ಕಾರಣಕ್ಕೂ ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಬಾರದು, ಐಎಲ್‌ಸಿ ಶಿಫಾರಸ್ಸಿನಂತೆ ಖಾಯಂ ಉದ್ಯೋಗಸ್ಥರಂತೆ ಪರಿಗಣಿಸಿ ಎಲ್ಲಾ ಶಾಸನಬದ್ದ ಸವಲತ್ತುಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಬೀಡಿ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕ ಜಯಂತ ನಾಯಕ್, ಸಮುದಾಯ ಸಂಘಟನೆಯ ನಾಯಕ ವಾಸುದೇವ ಉಚ್ಚಿಲ್ ಮಾತನಾಡಿದರು.
ಸಿಐಟಿಯು ನಾಯಕರಾದ ಯೋಗೀಶ್ ಜಪ್ಪಿನಮೊಗರು, ಸುಂದರ ಕುಂಪಲ, ಪ್ರಮೋದಿನಿ, ಬಿಸಿಯೂಟ ನೌಕರರ ಸಂಘಟನೆಯ ನಾಯಕಿಯರಾದ ರೇಖಾಲತಾ, ಬಬಿತಾ, ಲೀಲಾವತಿ, ಮೋಹಿನಿ, ಶೋಭಾ, ಸುಶೀಲಾ, ಚಿತ್ರಾವತಿ, ಸಬೀನಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.