ಮಂಗಳೂರು: ಕಾರಾಗೃಹದ ಕೈದಿಗೆ ನೀಡಲು ತಂದಿದ್ದ ಎಂಡಿಎಂಎ ವಶ; ಆರೋಪಿ ಸೆರೆ
ಸಾಂದರ್ಭಿಕ ಚಿತ್ರ
ಮಂಗಳೂರು: ದ.ಕ.ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನಿಗೆ ನೀಡಲು ತಂದಿದ್ದ ಎಂಡಿಎಂಎ ಮಾದರಿ ಪುಡಿ ಸಹಿತ ಒಬ್ಬನನ್ನು ಕಾರಾಗೃಹದ ಭದ್ರತೆಗೆ ನಿಯೋಜನೆ ಮಾಡಿರುವ ಪೊಲೀಸರು ವಶಕ್ಕೆ ಪಡೆದು ಬರ್ಕೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ನೀಡಿದ ದೂರಿನಂತೆ ಆರೋಪಿ ಉರ್ವಸ್ಟೋರ್ ನಿವಾಸಿ ಆಶಿಕ್ ಎಂಬಾತನನ್ನು ಬಂಧಿಸಿದ್ದಾರೆ.
ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಅನ್ವಿತ್ ಎಂಬಾತನನ್ನು ಭೇಟಿ ಮಾಡಲು ಸೋಮವಾರ ಮಧ್ಯಾಹ್ನ 12:45ರ ವೇಳೆಗೆ ಆಶಿಕ್ ಬಂದಿದ್ದ. ಕೈದಿಗೆ ನೀಡಲು ತಂದಿದ್ದ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದಾಗ ಟೂತ್‌ಪೇಸ್ಟ್ ಒಳಭಾಗದಲ್ಲಿ ಅನುಮಾನಾಸ್ಪದ ವಸ್ತುಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಹಾಯಕ ಕಮಾಂಡೆಂಟ್ ಅದನ್ನು ಪರಿಶೀಲಿಸಿದಾಗ ಎಂಡಿಎಂಎನಂತೆ ಕಾಣುವ ಬಿಳಿ ಬಣ್ಣದ ಹರಳಿನಂತಿರುವ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಆಶಿಕ್ ಬಳಿ ವಿಚಾರಿಸಿದಾಗ ಕಾರಾಗೃಹದ ಮುಂಭಾಗದ ಜೆರಾಕ್ಸ್ ಅಂಗಡಿ ಹತ್ತಿರ ವ್ಯಕ್ತಿಯೊಬ್ಬ ಕೆಲವು ಬೇಕರಿ ತಿಂಡಿಗಳನ್ನು ನೀಡಲಿದ್ದು, ಅದನ್ನು ಅನ್ವಿತ್‌ಗೆ ನೀಡುವಂತೆ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸಚಿನ್ ತಲಪಾಡಿ ಎಂಬಾತನ ಸೂಚನೆಯಂತೆ ತಂದಿರುವುದಾಗ ಹೇಳಿಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಠಾಣೆಯ ಪೊಲೀಸರು ತಿಳಿಸಿದ್ದಾರೆ.