×
Ad

ಮಂಗಳೂರು | ನಮೋ ಬ್ಯಾಡ್ಮಿಂಟನ್ ಟೂರ್ನಿಗೆ ಸಂಸದ ಕ್ಯಾ.ಚೌಟ ಚಾಲನೆ

Update: 2025-11-29 21:08 IST

ಮಂಗಳೂರು, ನ.26: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆರೋಗ್ಯಪೂರ್ಣ ವಿಕಸಿತ ಭಾರತದ ಪರಿಕಲ್ಪನೆಯ ಸಂಸತ್ ಕ್ರೀಡೋತ್ಸವದ ಭಾಗವಾಗಿ ಶನಿವಾರ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ನಮೋ ಬ್ಯಾಡ್ಮಿಟನ್ ಟೂರ್ನಮೆಂಟ್ ಅನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಿಂತನೆಯ ವಿಕಸಿತ ಭಾರತ ನಿರ್ಮಾಣವಾಗಬೇಕಾದರೆ ಮೊದಲು ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ನಮೋ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕಳೆದ ವಾರ ನಮೋ ಚೆಸ್ ಟೂರ್ನಿ ಆಯೋಜಿಸಲಾಗಿದ್ದು, ಇದೀಗ ನಮೋ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ ನೀಡಲಾಗಿದೆ. ನ.30ರಂದು ನಮೋ ವಾಲಿಬಾಲ್ ಟೂರ್ನಿ ನಡೆಯಲಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಭಾರತ ದೇಶವು ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿಯ ಹೆಜ್ಜೆ ಹಾಕುತ್ತಿದೆ. ಇಂಥಹ ಕಾಲಘಟ್ಟದಲ್ಲಿ ಕೇವಲ ಫಿಟ್ ಇಂಡಿಯಾ ಭಾರತ ಮಾತ್ರ ವಿಕಸಿತ ಭಾರತವಾಗಿ ರೂಪುಗೊಳ್ಳುವುದಕ್ಕೆ ಸಾಧ್ಯ ಎಂದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದ ಸಂಸತ್ ಕ್ರೀಡೋತ್ಸವು ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ ಎಂದರು.

ಉದ್ಘಾಟನೆ ಬಳಿಕ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರು ಬ್ಯಾಡ್ಮಿಂಟನ್ ಆಟವಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News