ಮಂಗಳೂರು ಮನಪಾದಲ್ಲಿ ಎಸ್ ಟಿಪಿಗಳ ನಿರ್ವಹಣೆಗೆ ತಲಾ 1.5 ಕೋ.ರೂ. ವೆಚ್ಚ ಮಾಡುತ್ತಿದ್ದರೂ ಕೊಳಚೆ ನೀರು ತೋಡುಗಳಲ್ಲಿ ಹರಿಯುತ್ತಿದೆ: ಐವನ್ ಡಿಸೋಜ
ಮಂಗಳೂರು, ಜ.20: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾವೂರಿನ ಎಸ್ ಟಿಪಿಯನ್ನು ಹೊರತುಪಡಿಸಿ ಉಳಿದ ಮೂರು ಎಸ್ ಟಿಪಿಗಳು ಅವ್ಯವಸ್ಥೆಯಲ್ಲಿವೆ. ಈ ಎಸ್ ಟಿಪಿಗಳ ನಿರ್ವಹಣೆಗಾಗಿ ತಲಾ 1.5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ ಕೊಳಚೆ ನೀರು ಮಾತ್ರ ರಾಜಕಾಲುವೆ, ತೋಡುಗಳಲ್ಲಿ ಹರಿಯುತ್ತಿದ್ದು, ಇದು ಬಿಜೆಪಿಯ ಸಾಧನೆಯೇ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.
ಮನಪಾ ಕಟ್ಟಡದಲ್ಲಿರುವ ವಿಧಾನ ಪರಿಷತ್ ಸದಸ್ಯರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿದರು. ನಗರದಲ್ಲಿ ಕಲುಷಿತ ನೀರು ಪೂರೈಕೆ ಹಾಗೂ ಎಸ್ ಟಿಪಿಗಳ ಕಾರ್ಯನಿರ್ವಹಣೆ ಕುರಿತಂತೆ ಪಾಲಿಕೆಯ ವಿಪಕ್ಷ ನಾಯಕ ಅಧ್ಯಕ್ಷತೆಯ ಸತ್ಯ ಶೋಧನಾ ಸಮಿತಿಯು ಕಂಡುಕೊಂಡ ನ್ಯೂನತೆ ಹಾಗೂ ಪರಿಹಾರೋಪಾಯಗಳ ಕುರಿತಂತೆ ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅಗತ್ಯ ಕ್ರಮಗಳ ಬಗ್ಗೆ ಮಾತುಕತೆಗಾಗಿ ಬೆಂಗಳೂರಿನಲ್ಲಿ ಸಂಸದರು, ಶಾಸಕರು ಹಾಗೂ ಮನಪಾ ಸದಸ್ಯರನ್ನು ಒಳಗೊಂಡ ಸಭೆ ನಡೆಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ ಎಂದವರು ಹೇಳಿದರು.
ಸತ್ಯ ಶೋಧನಾ ಸಮಿತಿಯ ವರದಿಯನ್ನು ಪಾಲಿಕೆಯ ನೂತನ ಆಯುಕ್ತರಿಗೆ ನೀಡಲಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದವರು ಹೇಳಿದರು.
ಪಚ್ಚನಾಡಿ, ಬಜಾಲ್, ಮಧ್ಯದಲ್ಲಿರುವ ಎಸ್ ಟಿಪಿಯನ್ನು ನಿರ್ವಹಣೆ ಮಾಡಲು ಎಂಆರ್ ಪಿಎಲ್ ಕಂಪೆನಿಗೆ ಒಪ್ಪಿಸಬೇಕಿದೆ. ಇದರಿಂದ ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ. ಸುರತ್ಕಲ್ ಮಧ್ಯದಲ್ಲಿರುವ ಎಸ್ ಟಿಪಿಗೆ ಕೊಳಚೆ ನೀರೇ ಹೋಗುತ್ತಿಲ್ಲ. ಜನರೇಟರ್ ವ್ಯವಸ್ಥೆ ಇಲ್ಲ. ಇದರಿಂದಾಗಿ ಅಲ್ಲಿಗೆ ಸಮೀಪದ ಖಂಡಿಗೆ ಎಂಬಲ್ಲಿ ತೋಡು, ಕೆರೆಯ ನೀರು ಕಲುಷಿತಗೊಂಡು ವರ್ಷಕ್ಕೊಮ್ಮೆ ನಡೆಯುವ ಖಂಡಿಗೆ ಮೀನು ಹಿಡಿಯುವ ಜಾತ್ರೆಗೆ ಕಂಟಕ ಎದುರಾಗಿದೆ. ಜಪ್ಪಿನಮೊಗರು ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇಂತಹ ವಾತಾವರಣದಿಂದ ಮಾರಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ, ಹಿಂದೆಯೂ ಹಾಗೇ ಇತ್ತು ಎಂಬ ಉತ್ತರ ಮನಪಾದ ಬಿಜೆಪಿಯ ಆಡಳಿತದ್ದು. ಹಿಂದೆಲ್ಲಾ ಈ ತೋಡು, ರಾಜಕಾಲುವೆ ನೀರಿನಲ್ಲಿ ಬಟ್ಟೆ ಒಗೆಯಲು ಬಳಸಲಾಗುತ್ತಿತ್ತು. ಆದರೆ ಇದೀಗ ನೇತ್ರಾವತಿ ಸೇರಿ ರಾಜ್ಯದ ಹಲವು ನದಿಗಳೇ ಕಲುಷಿತವಾಗಿರುವ ವರದಿ ಇದೆ. ಹಾಗಾಗಿ ಸೂಕ್ತ ಕ್ರಮದ ಅಗತ್ಯವಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮನಪಾ ಪ್ರತಿಪಕ್ಷದ ನಾಯಕ ಅನಿಲ್ ಕುಮಾರ್, ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಅಶ್ರಫ್, ಪ್ರವೀಣ್ ಚಂದ್ರ ಆಳ್ವ, ಲ್ಯಾನ್ಸಿಲಾಟ್ ಪಿಂಟೋ, ಸಂಶುದ್ದೀನ್, ಕೇಶವ ಮರೋಳಿ, ಚೇತನ್, ಕಿಶೋರ್ ಕುಮಾರ್, ಸತೀಶ್ ಪೆಂಗಲ್, ಅಮೃತ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.
ಮಧ್ಯ ಎಸ್ ಟಿಪಿ ಪುನರಾರಂಭವಾಗದಿದ್ದರೆ ಬೀಗ ಜಡಿದು ಪ್ರತಿಭಟನೆ
ಮಧ್ಯದ ಎಸ್ಟಿಪಿಯಲ್ಲಿ ಸಿಬ್ಬಂದಿಯೇ ಕಾಣ ಸಿಗುವುದಿಲ್ಲ. ಹಾಗಿದ್ದರೂ, ಅಲ್ಲಿ 13 ಜನರಿಗೆ ನಿರ್ವಹಣೆಗೆ ಸಂಬಳ ನೀಡಲಾಗುತ್ತದೆ. ಈ ಎಸ್ ಟಿಪಿಯನ್ನು ಪುನರ್ ಕಾರ್ಯಾರಂಭಿಸುವಂತೆ ಮಾಡದಿದ್ದರೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಐವನ್ ಡಿಸೋಜ ಹೇಳಿದರು.