ಮಂಗಳೂರು | ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಈಶ್ವರಾನಂದ ಪುರಿ ಸ್ವಾಮೀಜಿ ಸಲಹೆ
ಮಂಗಳೂರು, ಡಿ.15: ಜ್ಞಾನವಿಲ್ಲದ ಬದುಕು ಯಾತಕೋ ಮನುಜ ಎಂದು ಭಕ್ತ ಕನಕದಾಸರು ಜನರಲ್ಲಿ ಕೇಳುತ್ತಿದ್ದರು. ಹಾಗಾಗಿ ಜ್ಞಾನವೇ ಪ್ರಧಾನವಾದುದು. ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಅವರನ್ನು ವಿದ್ಯಾವಂತರನ್ನಾಗಿಸಿದರೆ, ಮುಂದೆ ಉತ್ತಮ ಉದ್ಯೋಗ ಸಂಪಾದಿಸಿಕೊಳ್ಳುತ್ತಾರೆ ಎಂದು ಕನಕ ಗುರು ಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ಸಲಹೆ ನೀಡಿದರು.
ಮಂಗಳೂರಿನ ಉರ್ವಸ್ಟೋರ್ ತುಳು ಭವನದಲ್ಲಿ ರವಿವಾರ ಕರಾವಳಿ ಕುರುಬರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ 538ನೇ ಕನಕ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಹಿಂದಿನ ಕಾಲದಲ್ಲಿ ಧಾರ್ಮಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿದುಕೊಳ್ಳಲು ಕಷ್ಟವಾಗುತ್ತಿತ್ತು. ಬಸವಣ್ಣ, ಕನಕದಾಸರು, ಪುರಂದರದಾಸರು ಮೊದಲಾದ ದಾಸವರೇಣ್ಯರು ಧಾರ್ಮಿಕ ವಿಚಾರಗಳನ್ನೊಳಗೊಂಡ ಪದ್ಯಗಳನ್ನು ಸರಳವಾದ ಭಾಷೆಯಲ್ಲಿ ಬರೆದು ಹಾಡಿ ಜನರ ಮಧ್ಯದಲ್ಲಿ ಪಸರಿಸುತ್ತಿದ್ದರು. ಹೀಗೆ ಸರಳವಾದ ಭಾಷೆಯಲ್ಲಿ ಜನರಿಂದ ಜನರಿಗೆ ಹರಡಿ ಭಕ್ತಿಯ ವಿಚಾರಗಳು, ಧಾರ್ಮಿಕ ವಿಚಾರಗಳು ಜ್ಞಾನದ ವಾಹಿನಿಗಳಾಗಿ ಹರಡಿದವು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಶ್ರೀಧರ್ ಟಿ.ಡಿ ಕಾರ್ಯಕ್ರಮ ಉದ್ಘಾಟಿಸಿದರು. ಯುವ ಸಾಹಿತಿ ಪ್ರವೀಣ ವೈ ಬೆನಕನವಾರಿ ಕನಕ ಸಂದೇಶ ನೀಡಿದರು. ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ ಶುಭ ಹಾರೈಸಿದರು. ಕರಾವಳಿ ಕುರುಬರ ಸಂಘದ ಅಧ್ಯಕ್ಷ ನಿರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಕರಾವಳಿ ಕುರುಬರ ಸಂಘದ ಗೌರವಾಧ್ಯಕ್ಷ ಡಾ.ಕೆ.ಇ ಪ್ರಕಾಶ್, ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಗಾಂಧಿನಗರ, ಉಪಾಧ್ಯಕ್ಷರಾದ ಮಂಜುನಾಥ್ ನೋಟಗಾರ್ ಹಾಗೂ ಕೆ.ಬಿ ನಾಗರಾಜ್, ಸಂಘದ ಜೊತೆ ಕಾರ್ಯದರ್ಶಿ ಯಲ್ಲಪ್ಪಹದಗಲ್, ಸಂಘದ ಕೋಶಾಧಿಕಾರಿ ಮಲ್ಲಿಕಾರ್ಜುನ ಕಲ್ಲಹೊಲದ, ಜೊತೆ ಕೋಶಾಧಿಕಾರಿ ನಾರಾಯಣ ಪಾಟೀಲ್, ಸಂಘಟನಾ ಕಾರ್ಯದರ್ಶಿ ಶರಣಪ್ಪ ಹಳ್ಳಿಕೇರಿ, ಜೊತೆ ಸಂಘಟನಾ ಕಾರ್ಯದರ್ಶಿ ಕರಿಯಪ್ಪ ಗೌಡರ, ಸಂಘದ ನಿರ್ದೇಶಕರಾದ ಬಸವರಾಜ ದಾಸಬಾಳ, ಹನುಮಂತ ಸಂಗೊಂದಿ, ಯಲ್ಲಪ್ಪಸಿದ್ದಾಪುರ, ಪರಶುರಾಮ ಕಡೂರ ಮತ್ತು ಶಿವು ಲಾಯದಗೊಂಡಿ ಉಪಸ್ಥಿತರಿದ್ದರು.
ಮೋಹನ್ದಾಸ್ ಮರಕಡ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಗಾಂಧಿನಗರ ವಂದಿಸಿದರು.
ಕನಕದಾಸರ ಭಾವಚಿತ್ರದ ಮೆರವಣಿಗೆ :
ಕಾರ್ಯಕ್ರಮದ ಆರಂಭದಲ್ಲಿ ಉರ್ವಸ್ಟೋರ್ ನ ಶಾರದಾ ಮಾನಸ ಮಂಟಪದಿಂದ ತುಳು ಭವನದ ತನಕ ಕುಣಿತ ಭಜನೆ, ಡೊಳ್ಳು ಕುಣಿತ, ಕಲಶ, ಕುಂಭ ಸಹಿತ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ್ ಟಿ.ಡಿ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮ ಆರಂಭಕ್ಕೆ ಮೊದಲು ಶೃಂಗೇರಿಯ ಶಾರದಾ ಅಂಧ ಕಲಾವಿದರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು.
ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಕನಕ ಗುರು ಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಕರಾವಳಿ ಕುರುಬರ ಸಂಘದ ಚಟುವಟಿಕೆಗಳಿಗೆ ಪ್ರೊತ್ಸಾಹಿಸುತ್ತಿರುವ ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ್ ಟಿ.ಡಿ, ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಅಸಂಗಪ್ಪ ಎಸ್.ಪಾಲ್ತಿ, ಸರ್ವಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಶಿವಾನಂದ ಯರಝೇರಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಶಿವಾನಂದ ಯರಝೇರಿ ಅವರು ಪ್ರಾಯೋಜಿಸಿದ ವಿದ್ಯಾರ್ಥಿವೇತನವನ್ನು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ಸಾಧಕ 29 ವಿದ್ಯಾರ್ಥಿಗಳಿಗೆ ನೀಡಲಾಯಿತು. ಎಜುಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀಶಾ ಶೆಟ್ಟಿ ಅಬ್ಬೆಟ್ಟು ಇವರಿಗೆ 50,000 ರೂ. ಪ್ರೋತ್ಸಾಹಕ ನಗದು ನೀಡಲಾಯಿತು.