ಮಂಗಳೂರು: ಬೀಜ ಮಸೂದೆ, ವಿದ್ಯುತ್ ಮಸೂದೆ ವಿರೋಧಿಸಿ ಪ್ರತಿಭಟನೆ
ಮಂಗಳೂರು : ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ದೇಶಾದ್ಯಂತ ರೈತ ಕಾರ್ಮಿಕರ ಸಖ್ಯತೆಯಲ್ಲಿ ಪ್ರತಿರೋಧ ದಿನಾಚರಣೆ ನಡೆಸಬೇಕೆಂದು ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ನಾಯಕ ಕೆ. ಯಾದವ ಶೆಟ್ಟಿ ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟ ಮಸೂದೆಗಳು ಮತ್ತು ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಗಳು ಯೋಜನೆಯ ಉದ್ದೇಶಗಳನ್ನೇ ಬುಡಮೇಲುಗೊಳಿಸಿದೆ. ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಳನ್ನೇ ಮುಖ್ಯವಾಗಿಟ್ಟುಕೊಂಡು ದೇಶ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿ ಕೊಟ್ಟಿದೆ. ಇವುಗಳ ವಿರುದ್ಧ ದೇಶದ ಜನರು ಹೋರಾಡದಿದ್ದರೆ ಅಪಾಯ ಕಾದಿದೆ ಎಂದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ ಈಗಾಗಲೇ ಹಲವು ಬೀಜ ಕಂಪೆನಿಗಳು ನೀಡಿದ ಕಳಪೆ ಗುಣಮಟ್ಟದ ಬೀಜದಿಂದ ನಷ್ಟ ಅನುಭವಿಸಿದ್ದ ರೈತರಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಬೆಳೆನಷ್ಟ ಪರಿಹಾರಗಳು ಸಿಕ್ಕಿಲ್ಲ. ಬೀಜ ಮಸೂದೆಯಲ್ಲಿ ಮುಂದೆಯೂ ಅದಕ್ಕೆ ಅವಕಾಶವಿಲ್ಲವಾಗಿದೆ. ಒಟ್ಟಿನಲ್ಲಿ ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಎಂ. ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಬಿ. ಶೇಖರ್ ಬಂಟ್ವಾಳ, ವಿ.ಕುಕ್ಯಾನ್, ಎಚ್.ವಿ. ರಾವ್, ಸುರೇಶ್ ಕುಮಾರ್ ಬಂಟ್ವಾಳ, ಗೀತಾ ಸುವರ್ಣ ಬಜಾಲ್, ಸಂಜೀವಿ ಹಳೆಯಂಗಡಿ, ಮೀನಾಕ್ಷಿ ಬಜಪೆ, ಕೃಷ್ಣಪ್ಪವಾಮಂಜೂರು, ಸುಧಾಕರ ಕಲ್ಲೂರು, ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು, ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರವಿಚಂದ್ರ ಕೊಂಚಾಡಿ, ಬಿ.ಕೆ. ಇಮ್ತಿಯಾಝ್, ವಸಂತಿ ಕುಪ್ಪೆಪದವು, ಲೋಲಾಕ್ಷಿ ಬಂಟ್ವಾಳ, ಈಶ್ವರಿ ಬೆಳ್ತಂಗಡಿ, ಜಯಂತಿ ಶೆಟ್ಟಿ, ಜಯಲಕ್ಷ್ಮಿ ಪ್ರಮೋದಿನಿ, ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಶೇಖರ್ ಕುಂದರ್, ಬಿ.ಎನ್. ದೇವಾಡಿಗ, ರಮೇಶ್ ಉಳ್ಳಾಲ ಮತ್ತಿತರರು ಪಾಲ್ಗೊಂಡಿದ್ದರು.