ಮಂಗಳೂರು| ಹೆಬ್ಬಾವು ಮಾರಾಟ ಪ್ರಕರಣ: ನಾಲ್ಕು ಮಂದಿ ಆರೋಪಿಗಳ ಬಂಧನ
Update: 2025-07-18 19:09 IST
ಸಾಂದರ್ಭಿಕ ಚಿತ್ರ
ಮಂಗಳೂರು, ಜು.18: ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಸಾಕುಪ್ರಾಣಿ ಮಾರಾಟದ ಅಂಗಡಿಯಲ್ಲಿ ಹೆಬ್ಬಾವು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ಅಪ್ರಾಪ್ತ ಸಹಿತ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ವಿಹಾಲ್ ಶೆಟ್ಟಿ (18), ಇಬ್ರಾಹಿಂ ಶಕೀಲ್ (35), ಅಂಗಡಿಯ ಸಿಬ್ಬಂದಿ ಮುಸ್ತಫಾ (22) ಹಾಗೂ 16 ವರ್ಷ ಪ್ರಾಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಸಾಕುಪ್ರಾಣಿ ಮಾರಾಟ ಅಂಗಡಿಯಲ್ಲಿ ಅಕ್ರಮವಾಗಿ ಹಾವು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಹಾವು ಖರೀದಿಯ ನೆಪದಲ್ಲಿ ವಿಹಾಲ್‌ನನ್ನು ಸಂಪರ್ಕಿಸಿದರು. ಬಳಿಕ ಅತನ ಮೂಲಕ ಇತರ ಮೂರು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳು ಇಂಡಿಯನ್ ರಾಕ್ ಪೈಥಾನ್ (ಹೆಬ್ಬಾವು)ನ್ನು ಹೊರದೇಶದ ಬರ್ಮಿಸ್ ಬಾಲ್ ಪೈಥಾನ್ ಎಂದು ಹೇಳಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.