Mangaluru | ವಾಹನ, ಸರಗಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
ಮಂಗಳೂರು: ಅಂತರ್ ರಾಜ್ಯಗಳಲ್ಲಿ ವಾಹನ ಹಾಗೂ ಸರಗಳ್ಳತನ ನಡೆಸಿದ ಪ್ರಕರಣಗಳ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ತೋಟ ಪೈಸಲ್ ಮತ್ತು ಮೈಸೂರಿನ ವಿನಾಯಕ ನಗರದ ನಿತೀನ್ ಕುಮಾರ್ ಬಂಧಿತ ಆರೋಪಿಗಳು.
ಆರೋಪಿಗಳಿಂದ ಸುಮಾರು 1,20,000 ರೂ. ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಿಸಿದ 45 ಸಾವಿರ ರೂ. ಮೌಲ್ಯದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿ.12ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಬೈಕ್ ಕಳವು ಆಗಿರುವ ಬಗ್ಗೆ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಕದ್ರಿ ಅಫರಾಧ ವಿಭಾಗದ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿಯಂತೆ ಡಿ.16ರಂದು ಪ್ರಕರಣದ ಪ್ರಮುಖ ಆರೋಪಿ ಪೈಸಲ್ ಅಲಿಯಾಸ್ ತೋಟ ಪೈಸಲ್ ಮತ್ತು ನಿತೀನ್ ಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ಡಿ.13ರಂದು ಭಟ್ಕಳ ಗ್ರಾಮಿಣ ಪೊಲೀಸ್ ಠಾಣಾ ಸರಹದ್ದಿನ ಗರ್ಡಿ ಹಿತ್ಲು ಬೆಳಕೆ ಎಂಬಲ್ಲಿ ವಯೋವೃದ್ಧೆ ಹೊನ್ನಮ್ಮ ಮಹಾದೇವ ನಾಯ್ಕ್ ಎಂಬವರ ಕುತ್ತಿಗೆಯಿಂದ ಚಿನ್ನದ ಚೈನ್‌ನ್ನು ಕಸಿದುಕೊಂಡು ಪರಾರಿಯಾದ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಬಾಯಿ ಬಿಟ್ಟಿದ್ದಾರೆ.
ಆರೋಪಿಗಳಿಂದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಪೈಸಲ್ ಅಲಿಯಾಸ್ ತೋಟ ಪೈಸಲ್‌ನ ವಿರುದ್ದ ಉಡುಪಿ ,ಕಾರ್ಕಳ, ಮಣಿಪಾಲ, ಮಂಗಳೂರು,ಬೆಳ್ತಂಗಡಿ, ವಿಟ್ಲ, ಕಂಕನಾಡಿ ನಗರ ಪೊಲೀಸ್ ಠಾಣೆ, ಪುತ್ತೂರು, ಶಿರ್ವ ಸುರತ್ಕಲ್, ಕಡಬ, ಕೊಣಾಜೆ, ಮಡಿಕೇರಿಯ ಕುಶಾಲ ನಗರ, ಹಾಗೂ ಕೇರಳ ರಾಜ್ಯಗಳಲ್ಲಿ , ದರೋಡೆ, ಕಳ್ಳತನದ ಮತ್ತು ಕೊಲೆ ಪ್ರಕರಣ ಸೇರಿದಂತೆ ಸುಮಾರು 42 ಪ್ರಕರಣಗಳು ದಾಖಲಾಗಿದೆ. ಈತನ ವಿರುದ್ದ ವಿವಿಧ ನ್ಯಾಯಾಲಯಗಳಲ್ಲಿ 10ಕ್ಕಿಂತಲೂ ಹೆಚ್ಚು ಜಾಮೀನು ರಹಿತ ವಾರೆಂಟ್ ಇದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆ ತಪ್ಪಿಸಿಕೊಂಡಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಅನಂತ ಪದ್ಮನಾಭ, ಪಿಎಸ್‌ಐ ಮನೋಹರ್ ಪ್ರಸಾದ್, ಎ.ಎಸ್‌ಐಗಳಾದ ಚಂದ್ರಶೇಖರ್, ಸುಧಾಕರ್ ರಾವ್, ರಾಜಶೇಖರ್, ಎಚ್‌ಸಿಗಳಾದ ಲೋಕೆಶ್, ಸಂತೋಷ್ ಡಿ.ಕೆ. ಸುರೇಶ್, ದಿಲೀಪ್, ಮೋಹನ್, ಮಲ್ಲಪ್ಪ ಬಿ. ಮತ್ತು ಪಿಸಿಗಳಾದ ಸುನೀಲ್, ಮಣಿಕಂಠ, ಮೌಲಾ ಅಹಮ್ಮದ್ ಮತ್ತು ಮಂಜುನಾಥ ವಡ್ಡರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.