×
Ad

ಮಂಗಳೂರು | ʼಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆʼ ಕುರಿತು ತರಬೇತಿ

Update: 2025-11-25 19:18 IST

ಮಂಗಳೂರು,ನ.25: ದ.ಕ.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಮಹಿಳಾ ಸಬಲೀಕರಣ ಘಟಕದ ಸಂಯುಕ್ತ ಆಶ್ರಯದಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ ಕುರಿತು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ನಗರದ ಕದ್ರಿ ಬಾಲಭವನದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ, ಕಾರ್ಯಕ್ರಮದ ಭಾಗಿದಾರರೆಲ್ಲರೂ ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪಾತ್ರ ವಹಿಸುವವರು. ಆದುದರಿಂದ ಸರಕಾರದ ಕಾನೂನುಗಳ ಹಾಗೂ ಯೋಜನೆಗಳ ಅರಿವು ಇರುವುದು ಹಾಗೂ ಸೇವೆಗಳನ್ನು ಒದಗಿಸುವುದು ಬಹುಮುಖ್ಯವಾಗಿದೆ. ಯಾವುದೇ ಮಹಿಳೆ ದೌರ್ಜನ್ಯಕ್ಕೆ ಒಳಗಾದಲ್ಲಿ ನೇರವಾಗಿ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಬಂದು ದೂರು ನೀಡಿ ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ತಡೆಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಸಂಘ-ಸಂಸ್ಥೆಗಳು ನೆರವಾಗಲಿದೆ ಎಂದರು.

ಮಂಗಳೂರು (ಗ್ರಾ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಿಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಯವಾದಿ ಶುಕರಾಜ್ ಕೊಟ್ಟಾರಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಅರಿಣಾ ಯಡಿಯಾಳ್ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News