×
Ad

ಮಂಗಳೂರು | ಉರ್ದು ಭಾರತದ ನೆಲದ ಭಾಷೆ : ಫಾತಿಮಾಬಿ

Update: 2025-11-30 19:55 IST

ಮಂಗಳೂರು, ನ.30: ಉರ್ದು ಭಾಷೆ ಭಾರತದಲ್ಲೇ ಹುಟ್ಟಿ, ಬೆಳೆದು, ಶಿಖರಕ್ಕೇರಿದ್ದು, ಅದು ಗಂಗೆ- ಯಮುನೆಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ಉರ್ದು ಭಾಷಿಗರು ಇದರ ಬಗ್ಗೆ ಹೆಮ್ಮೆಪಡಬೇಕು ಎಂದು ಮಂಗಳೂರು ಡಯೆಟ್‌ನ ಹಿರಿಯ ಪ್ರಾಧ್ಯಾಪಕಿ ಫಾತಿಮಾಬಿ ಟಿ.ಐ. ಹೇಳಿದ್ದಾರೆ.

ಬೋಳಾರದ ಶಾದಿ ಮಹಲ್‌ನಲ್ಲಿ ರವಿವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಅಂಜುಮನ್ ತರಖಿ-ಎ- ಉರ್ದು ಮತ್ತು ಅರೇಬಿಕ್ ಸಂಸ್ಥೆ ಆಯೋಜಿಸಿದ್ದ ಉರ್ದು ಚರ್ಚಾ ಚಾಂಪಿಯನ್‌ಶಿಪ್ ಟ್ರೋಫಿ- 2025ರ ಬಹುಮಾನ ವಿತರಣೆ ನೆರವೇರಿಸಿ ಅವರು ಮಾತನಾಡಿದರು.

ಉರ್ದು ದೇಶದ ಮಣ್ಣಿನ ಭಾಷೆಯಾಗಿದ್ದು, ಅದರಲ್ಲಿ ಸಿಹಿತನ, ತಾಜಾತನ, ಸಂಸ್ಕೃತಿ, ಸಂಸ್ಕಾರದ ಸಮ್ಮಿಲನ ಹಾಗೂ ಹೃದಯವನ್ನು ತಟ್ಟುವ ಶಕ್ತಿ ಇದೆ. ಧಾರ್ಮಿಕ ವಿದ್ವಾಂಸರು, ಕವಿಗಳು, ಸಾಹಿತಿಗಳು ಉರ್ದುವನ್ನು ಬೆಳೆಸಿದ್ದಾರೆ. ಇದು ಇಡೀ ಭಾರತೀಯರಿಗೆ ಸೇರಿದ ಭಾಷೆಯಾಗಿದ್ದು, ಕೇವಲ ಒಂದು ಧರ್ಮದ ಜತೆ ಜೋಡಿಸುವುದು ದುರಂತ ಎಂದು ವಿಷಾದಿಸಿದರು.

ಮಾತೃ ಭಾಷೆಯಲ್ಲೇ ಶಿಕ್ಷಣ ಕಲಿಯಬೇಕು ಎಂಬುದು ನಿಯಮ. ಅದರಂತೆ ಪೋಷಕರು ತಮ್ಮ ಮಕ್ಕಳಿಗೆ ಉರ್ದು ಕಲಿಸಬೇಕು. ಮಕ್ಕಳು ಸ್ವರ್ಗದ ಹೂಗಳಂತೆ. ಆ ಹೂಗಳು ಬಾಡದಂತೆ, ಅವರ ವ್ಯಕ್ತಿತ್ವ ರೂಪಿಸಿ ಅರಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರದ್ದು ಎಂದು ಅವರು ಹೇಳಿದರು.

ಶಿವಮೊಗ್ಗ ಡಿಡಿಪಿಐ ಕಚೇರಿ ಸಿಇಒ ಡಾ.ಝಾಕಿರ್ ಮಾತನಾಡಿ, ರಾಜ್ಯದಲ್ಲಿ ಕನ್ನಡದ ಜತೆ ತಮಿಳು, ತೆಲುಗು ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಬಹುಭಾಷೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಶಾಲೆಗಳಲ್ಲಿ ಮಾತ್ರ ಉರ್ದು ಉಳಿದಿದೆ ಎನ್ನುವುದು ಬೇಸರದ ಸಂಗತಿ. ಅರೇಬಿಕ್ ಓದುವ ಮಕ್ಕಳು ಉರ್ದು ಓದಬಲ್ಲರು. ಸರಕಾರಿ ಶಾಲೆಗಳ 1-5 ತರಗತಿಯಲ್ಲಿ ಉರ್ದು ಕಲಿಸಲು ಅನುಮತಿ ಪಡೆಯುವ ಅಗತ್ಯವಿಲ್ಲ. ಇಂಗ್ಲಿಷ್, ಕನ್ನಡ ಅಥವಾ ಉರ್ದು ಆಯ್ಕೆಗೆ ಅವಕಾಶವಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಸಲಾಮ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಶಾದಿ ಮಹಲ್ ಉಪಾಧ್ಯಕ್ಷ ಎಸ್.ಎ.ಖಲೀಲ್ ಉಪಸ್ಥಿತರಿದ್ದರು. ಶಿಕ್ಷಕರಾದ ಮುಹಮ್ಮದ್ ಸಲೀಂ ಮತ್ತು ಮುಹಮ್ಮದ್ ಝಿಯಾವುಲ್ಲಾ ತೀರ್ಪುಗಾರರಾಗಿದ್ದರು.

ಸಂಸ್ಥೆಯ ಸದಸ್ಯ ಆಬಿದ್ ಅಸ್ಗರ್ ಸ್ವಾಗತಿಸಿದರು. ಕಾರ್ಯದರ್ಶಿ ಮಾಸ್ಟರ್ ಮುಹಮ್ಮದ್ ಹನೀಫ್ ಪ್ರಾಸ್ತಾವಿಕ ಮಾತನಾಡಿದರು. ಇಕ್ರಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News