ಮಂಗಳೂರು ವಿವಿ ವಿದ್ಯಾರ್ಥಿಗಳ ಅಂಕಪಟ್ಟಿ ಸಮಸ್ಯೆ: ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸ್ಪೀಕರ್ ಯು.ಟಿ ಖಾದರ್
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ ಮತ್ತು ಮಾಡುತ್ತಿರುವ 2022-23ನೇ ಸಾಲಿನ ನಂತರದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದಿಂದ ಭೌತಿಕ ಅಂಶ ಹೊಂದಿದ ಅಂಕಪಟ್ಟಿ ದೊರೆಯದ ಕಾರಣ ಸೃಷ್ಟಿ ಯಾದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಬುಧವಾರ ತನ್ನ ಕಚೇರಿಯಲ್ಲಿ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಭೌತಿಕ ಅಂಕಪಟ್ಟಿಗಾಗಿ ಸೆಮಿಸ್ಟರ್‌ವೊಂದಕ್ಕೆ 230 ರೂ.ರಂತೆ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು ಪಾವತಿಸಿದ್ದಾರೆ. ಆದರೆ ಭೌತಿಕ ಅಂಕಪಟ್ಟಿ ನೀಡದಂತೆ ಸರಕಾರ ಸೂಚಿಸಿದೆ. ಹಾಗಾಗಿ ಭೌತಿಕ ಅಂಕಪಟ್ಟಿ ನೀಡಲು ಸಾಧ್ಯವಿಲ್ಲ. ಪ್ರಸ್ತುತ ಅಂಕಪಟ್ಟಿಗಳನ್ನು ಡಿಜಿಲಾಕರ್ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ವಿಶ್ವವಿದ್ಯಾನಿಲಯವು ಸೂಚಿಸುತ್ತದೆ. ಆದರೆ ಈ ತಂತ್ರಜ್ಞಾನವು ಹಲವಾರು ಸಮಸ್ಯೆಗಳಿಂದ ಕೂಡಿದೆ. ವಿಶ್ವವಿದ್ಯಾನಿಲಯದ ಅಂಕಪಟ್ಟಿಗೂ ಡಿಜಿಟಲ್ ಅಂಕಪಟ್ಟಿಗೂ ವ್ಯತ್ಯಾಸ ಇದೆ. ಇದನ್ನು ಆಧರಿಸಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಕಂಪೆನಿಗಳು ಉದ್ಯೋಗ ನೀಡಲು ನಿರಾಕರಿಸು ತ್ತದೆ. ವಿದೇಶದಲ್ಲಿ ಕೆಲಸ ಮಾಡಲು ಭೌತಿಕ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಆದರೆ ಭೌತಿಕ ಅಂಕಪಟ್ಟಿ ಸಿಗದ ಕಾರಣ ಸಮಸ್ಯೆಯಾಗಿದೆ ಎಂದು ಎನ್‌ಎಸ್‌ಯುಐ ಸಂಘಟನೆಯು ಆಪಾದಿಸಿತ್ತು. ಅಲ್ಲದೆ ಸ್ಪೀಕರ್ ಖಾದರ್‌ರ ಗಮನ ಸೆಳೆದಿತ್ತು.
ಅದರಂತೆ ಖಾದರ್ ಅವರು ಉನ್ನತ ಶಿಕ್ಷಣ ಇಲಾಖೆಯ ಸಚಿವರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದರಲ್ಲದೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಕರ್, ಉನ್ನತ ಶಿಕ್ಷಣ ಇಲಾಖೆಯ ರಾಜ್ಯ ನೋಡಲ್ ಅಧಿಕಾರಿಯೂ ಆಗಿರುವ ಯುನಿಫೈಡ್ ಯುನಿವರ್ಸಿಟಿ ಆ್ಯಂಡ್ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್‌ನ ಯೋಜನಾ ನಿರ್ದೇಶಕ ಡಾ. ಭಾಗ್ಯವಾನ, ಮಂಗಳೂರು ವಿವಿ ರಿಜಿಸ್ಟ್ರಾರ್ (ಮೌಲ್ಯಮಾಪನ) ದೇವೇಂದ್ರಪ್ಪ ಅವರೊಂದಿಗೆ ವಿಧಾನಸೌಧದದಲ್ಲಿರುವ ತನ್ನ ಕಚೇರಿಯಲ್ಲಿ ಚರ್ಚೆ ನಡೆಸಿದರು.
ಅಂಕಪಟ್ಟಿಗಳನ್ನು ನಕಲು ಮಾಡುವುದರಿಂದ ಸಮಸ್ಯೆ ತಲೆದೋರುತ್ತದೆ. ಅದನ್ನು ತಪ್ಪಿಸಲು ಡಿಜಿಟಲ್ ಅಂಕಪಟ್ಟಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸಮಜಾಯಿಸಿದರು. ಆದರೆ, ಅದರಿಂದ ವಿದ್ಯಾರ್ಥಿಗಳ ಮೇಲಾಗುವ ದುಷ್ಪರಿಣಾಮದ ಬಗ್ಗೆ ಗಮನ ಸೆಳೆದ ಖಾದರ್ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಂಡು ವಿವಿ ಮೌಲ್ಯಮಾಪನ ವಿಭಾಗದ ಮೂಲಕವೇ ಭೌತಿಕ ಅಂಕಪಟ್ಟಿ ನೀಡಲು ಸೂಚಿಸಿದರು. ಅಂತಿಮವಾಗಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೌತಿಕ ಅಂಕಪಟ್ಟಿ ನೀಡಲು ಒಪ್ಪಿಗೆ ನೀಡಿದರು.
ಈ ಸಂದರ್ಭ ಎನ್‌ಎಸ್‌ಯುಐ ಮುಖಂಡ ಸಾಹಿಲ್ ಮತ್ತಿತರರು ಹಾಜರಿದ್ದರು.