ಮೂಡುಬಿದಿರೆ | ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ : ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ
ಮೂಡುಬಿದಿರೆ: ಸ್ವಸ್ತಿ ಶ್ರೀ ಕಾಲೇಜನ್ನು ದಶಕಗಳಿಂದ ಮುನ್ನಡೆಸುತ್ತಿದ್ದು, ಇಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ಉತ್ತಮ ಕೌಶಲ್ಯವನ್ನು ಹೊಂದಿರುವ ಉಪನ್ಯಾಸಕ ವೃಂದ ಕಾಲೇಜಿನಲ್ಲಿದೆ. ಸ್ಪರ್ಧಾತ್ಮಕ ಭರಾಟೆಯಲ್ಲಿ ದಾಖಲಾತಿ ಕಡಿಮೆಯಾದರೂ, ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ದಾಖಲಿಸುವ ಕೆಲಸವನ್ನು ಉಪನ್ಯಾಸಕರು ಮಾಡಬೇಕಾಗಿದೆ ಎಂದು ಸ್ವಸ್ತಿಶ್ರೀ ಶಿಕ್ಷಣ ಸಂಸ್ಥೆಯ ಸ್ಥಾಪಕ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಅವರು ಜೈನಮಠದ ಭಟ್ಟಾರಕ ಸಭಾಭವನದಲ್ಲಿ ಬುಧವಾರ ನಡೆದ ಧವಲತ್ರಯ ಜೈನಕಾಶಿ ಟ್ರಸ್ಟ್ ಅಧೀನದ ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನ 12ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ರಾಜೇಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ, ಸಾಮಾನ್ಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು ಎನ್ನುವುದು ಸ್ವಾಮೀಜಿಯವರ ಆಶಯ. ಶಿಕ್ಷಣದ ಸಾಧನೆಯೊಂದಿಗೆ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸ್ವಾಮೀಜಿಯವರ ನೇತೃತ್ವದಲ್ಲಿ ಸಾಮಾಜಿಕ ಚಿಂತನೆಯೊಂದಿಗೆ ಮುನ್ನಡೆಯುತ್ತಿರುವ ಶಿಕ್ಷಣ ಸಂಸ್ಥೆ ಮುಂದೆ ಮತ್ತಷ್ಟು ಎತ್ತರವಾಗಿ ಬೆಳೆಯುತ್ತದೆ ಎಂದರು.
ಎಂ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಮಂಜುಳಾ ಅಭಯಚಂದ್ರ ಜೈನ್, ವಕೀಲರಾದ ರಂಜನ್ ಪೂವಣಿ, ಶ್ವೇತಾ ಜೈನ್, ಉದ್ಯಮಿ ನವ್ಯ ತೇಜಸ್ ಮುಖ್ಯ ಅತಿಥಿಗಳಾಗಿದ್ದರು.
ದ್ವಿತೀಯ ಪಿಯುಸಿ ಶೃತಿ ಬೆಸ್ಟ್ ಸ್ಟೂಡೆಂಟ್, ಬೆಸ್ಟ್ ಒಬಿಡಿಯೆಂಟ್ ಸ್ಟೂಡೆಂಟ್ ಮನೋಜ್, ಬೆಸ್ಟ್ ಸೋಶಿಯಲ್ ವರ್ಕರ್ ಶಿವಾನಿ ಪುರಸ್ಕಾರಗಳನ್ನು ಪಡೆದರು. ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಸುಮಂತ್ ಹಾಗೂ ಸೌಮ್ಯ ಪಡೆದರು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಾಂಶುಪಾಲ ಸೌಮಶ್ರೀ ಸ್ವಾಗತಿಸಿದರು. ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಷ್ಮಾ ವರದಿ ವಾಚಿಸಿದರು. ಅಕ್ಷತಾ ಶೈಕ್ಷಣಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿವರ ನೀಡಿದರು. ಸಾಂಸ್ಕೃತಿಕ ಸ್ಪರ್ಧೆಗಳ ವಿವರವನ್ನು ಪಾವನಶ್ರೀ, ಹಿತೇಶ್ ರಾವ್ ಕ್ರೀಡಾ ಸ್ಪರ್ಧೆಯ ವಿವರವನ್ನು ನೀಡಿದರು. ಸುಜಾತ ವಂದಿಸಿದರು.