×
Ad

ಮಂಗಳೂರು ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ ಸ್ಥಾನಮಾನ ನೀಡಲು ಸಂಸದ ಬ್ರಿಜೇಶ್ ಚೌಟ ಆಗ್ರಹ

Update: 2025-12-10 19:27 IST

ಬ್ರಿಜೇಶ್ ಚೌಟ

ಹೊಸದಿಲ್ಲಿ, ಡಿ.10: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುರ್ತಾಗಿ ಪಾಯಿಂಟ್ ಆಫ್ ಕಾಲ್ (ಟಇ) ಸ್ಥಾನಮಾನ ನೀಡಬೇಕು ಎಂದು ಸಂಸದ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ನಿಯಮ 377ರಡಿ ಈ ವಿಷಯದ ಬಗ್ಗೆ ಧ್ವನಿಯೆತ್ತಿದ ಸಂಸದ ಚೌಟ ಅವರು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕರಾವಳಿ ಕರ್ನಾಟಕ ಮತ್ತು ನೆರೆಯ ಕೇರಳಕ್ಕೆ ಪ್ರಮುಖ ವಾಯುಯಾನ ಹೆಬ್ಬಾಗಿಲಾಗಿದೆ. ಈ ವಿಮಾನ ನಿಲ್ದಾಣ 2024-25ರ ಅವಧಿಯಲ್ಲಿ 7.15 ಲಕ್ಷ ಅಂತರರಾಷ್ಟ್ರೀಯ ಪ್ರಯಾಣಿಕರ ಸಹಿತ ಸುಮಾರು 23.4 ಲಕ್ಷ ಪ್ರಯಾಣಿಕರ ಪ್ರಯಾಣವನ್ನು ನಿರ್ವಹಿಸಿದೆ. ಅದಕ್ಕಾಗಿ 16,800ಕ್ಕೂ ಹೆಚ್ಚು ವಿಮಾನಗಳ ಹಾರಾಟವಾಗಿದೆ. ಇದು ವಾರ್ಷಿಕವಾಗಿ ಶೇ.15ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ಈ ಅಂಕಿ-ಅಂಶಗಳು ವಿಮಾನ ನಿಲ್ದಾಣದ ಬೆಳವಣಿಗೆ ಮತ್ತು ವಾಣಿಜ್ಯ ಉತ್ತೇಜನದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತವೆ ಎಂದು ಹೇಳಿದ್ದಾರೆ.

ತುಳುನಾಡು ಪ್ರದೇಶಗಳ ಗಣನೀಯ ಸಂಖ್ಯೆಯ ಜನರು ಗಲ್ಫ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಔದ್ಯೋಗಿಕ ಸಮುದಾಯವು ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಮಂಗಳೂರು ವಿಮಾನ ನಿಲ್ದಾಣವನ್ನೇ ಹೆಚ್ಚು ಅವಲಂಬಿಸಿಕೊಂಡಿದೆ. ಆದರೆ, ಪಾಯಿಂಟ್ ಆಫ್ ಕಾಲ್ ಸ್ಥಾನಮಾನದ ಕೊರತೆಯಿಂದಾಗಿ ವಿದೇಶಿ ವಿಮಾನಯಾನ ಸಂಸ್ಥೆಗಳು ಇಲ್ಲಿಂದ ನೇರ ಅಂತರರಾಷ್ಟ್ರೀಯ ಸೇವೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರಯಾಣಿಕರು ಬೆಂಗಳೂರು ಅಥವಾ ಕೊಚ್ಚಿನ್ ವಿಮಾನ ನಿಲ್ದಾಣದ ಮೂಲಕ ಸಂಚರಿಸಬೇಕಾದ ಪರಿಸ್ಥಿತಿಯಿದೆ. ಇದರಿಂದ ಅನಿವಾಸಿ ಭಾರತೀಯ ಸಮುದಾಯಕ್ಕೆ ದುಬಾರಿ ವೆಚ್ಚ, ದೀರ್ಘ ಪ್ರಯಾಣದ ಸಮಯದ ಜತೆಗೆ ನಾನಾ ರೀತಿಯ ಅನಾನುಕೂಲತೆ ಎದುರಾಗುತ್ತಿದೆ ಎಂದು ಬ್ರಿಜೇಶ್ ಚೌಟ ಸದನದ ಗಮನ ಸೆಳೆದಿದ್ದಾರೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಇ ಸ್ಥಾನಮಾನ ನೀಡುವುದರಿಂದ ಈ ಭಾಗದ ಜನರಿಗೆ ನೇರ ಅಂತರರಾಷ್ಟ್ರೀಯ ಸಂಪರ್ಕ ಸಾಧ್ಯವಾಗುತ್ತದೆ. ಜತೆಗೆ ವಿಮಾನಯಾನ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸುವುದಕ್ಕೆ ಅನುಕೂಲವಾಗುತ್ತದೆ. ವಿದೇಶದಲ್ಲಿ ದುಡಿಯುವ ವರ್ಗಕ್ಕೆ ಹಾಗೂ ಅವರ ಕುಟುಂಬಗಳ ಸುಗಮ ಪ್ರಯಾಣ ಸಾಧ್ಯವಾಗುತ್ತದೆ. ಈ ರೀತಿಯ ವಿಮಾನಯಾನ ಸಂಪರ್ಕವು ಸಹಜವಾಗಿಯೇ ಇಲ್ಲಿನ ವ್ಯಾಪಾರ ಮತ್ತು ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಇದು ಸಾಗರೋತ್ತರ ಉತ್ಪನ್ನಗಳ ರಫ್ತು, ಅಡಿಕೆ, ಗೋಡಂಬಿ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್‌ನಂತಹ ಪ್ರಾದೇಶಿಕ ಉದ್ಯಮಗಳಿಗೂ ಬೆಂಬಲ-ಉತ್ತೇಜನ ನೀಡುತ್ತದೆ. ಜೊತೆಗೆ ಮಂಗಳೂರು ವಿಶೇಷ ಆರ್ಥಿಕ ವಲಯದ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಸಂಸದ ಚೌಟ ಸದನಕ್ಕೆ ಮನವರಿಕೆ ಮಾಡಿದರು.

ಅಂತರರಾಷ್ಟ್ರೀಯವಾಗಿ ನೇರ ಸಂಪರ್ಕ ವ್ಯವಸ್ಥೆ ಕಲ್ಪಿಸುವುದರಿಂದ ಕರಾವಳಿ ಭಾಗದ ಪ್ರವಾಸೋದ್ಯಮದ ಬೆಳವಣಿಗೆ ಜತೆಗೆ ಶಿಕ್ಷಣ ಕ್ಷೇತ್ರದ ಪ್ರಗತಿಯನ್ನು ಕೂಡ ಹೆಚ್ಚಿಸಬಹುದು. ಇದು ಎನ್‌ಐಟಿಕೆ ಸುರತ್ಕಲ್ ಮತ್ತು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಂತಹ ಪ್ರತಿಷ್ಠಿತ ಸಂಸ್ಥೆಗಳ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಂದರ್ಶಕರಿಗೆ ಅಂತಾರಾಷ್ಟ್ರೀಯ ವೇದಿಕೆಗಳಿಗೆ ಸುಲಭವಾಗಿ ಪ್ರಯಾಣಿಸುವುದಕ್ಕೂ ಅನುಕೂಲ ಕಲ್ಪಿಸುತ್ತದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News