ಸುರತ್ಕಲ್ | ಎಂಆರ್‌ಪಿಎಲ್ 4ನೇ ಹಂತದ ನಿರ್ವಸಿತರ 9 ವರ್ಷಗಳ ಹೋರಾಟಕ್ಕೆ ಜಯ; 436 ಮಂದಿಗೆ ಉದ್ಯೋಗ, ಪುನರ್ವಸತಿ ಬದಲು ನಗದು ಪರಿಹಾರ
ಸುರತ್ಕಲ್: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿ. (ಎಂಆರ್‌ಪಿಎಲ್) 4ನೇ ಹಂತದಿಂದ ಭೂ ನಿರ್ವಸಿತರಾಗುವ ಕುತ್ತೆತೂರು, ಪೆರ್ಮುದೆ, ಎಕ್ಕಾರು ಗ್ರಾಮದ ನಿರ್ವಸಿತರ ಕುಟುಂಬಗಳ ಸಭೆಯು ಜಿಲ್ಲಾಧಿಕಾರಿ ದರ್ಶನ್ ಎಚ್. ವಿ., ಸಂಸದರು, ಶಾಸಕರು ಮತ್ತು ಎಂಆರ್‌ಪಿ ಎಲ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗುರುವಾರ ನಡೆಯಿತು.
ಸಭೆಯಲ್ಲಿ ಸ್ಥಳೀಯರ ಬೇಡಿಕೆಗಳಾದ ನಿರ್ವಸಿತ ಕುಟುಂಬಗಳ ಒಟ್ಟು 436 ಮಂದಿಗೆ ಉದ್ಯೋಗಾವಕಾಶ, ಪುನರ್ವಸತಿ ಕಲ್ಪಿಸುವ ಬದಲು ನಗದು ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಈ ಮೂಲಕ ಒಂಭತ್ತು ವರ್ಷಗಳ ನಿರ್ವಸಿತರ ಹೋರಾಟಕ್ಕೆ ಜಯ ದೊರೆತಿದೆ.
ಜಿಲ್ಲಾಧಿಕಾರಿ ನೇತೃತ್ವದ ಆರ್ ಆಂಡ್ ಆರ್ ಸಮಿತಿಯ ಸದಸ್ಯ, ನಿರ್ವಸಿತ ಸಮಿತಿಯ ಗೌರವಾಧ್ಯಕ್ಷ ಜೆ.ಐ.ಡೋನಿ ಸುವಾರಿಸ್ ಮಾತನಾಡಿ, ಸಂತ್ರಸ್ತರಿಗೆ ಉದ್ಯೋಗ ಮತ್ತು ನಿರ್ವಸಿತರಿಗೆ ನಿವೇಶನವನ್ನು ವಿಳಂಬವಿಲ್ಲದೆ ಕೂಡಲೇ ನೀಡಬೇಕೆಂದು ಒತ್ತಾಯಿಸಿದರು.
ಉದ್ಯೋಗದ ಕುರಿತಂತೆ ಈವರೆಗೆ ಯಾವುದೇ ಗಡುವನ್ನು ನಿಗದಿಪಡಿಸದ ಕಾರಣ ಸಭೆಯಲ್ಲಿ ನಿಗದಿಪಡಿಸುವಂತೆ ಸಮಿತಿಯ ಸಹ ಸದಸ್ಯರು ಒತ್ತಾಯಿಸಿದರು.
ಈ ಬಗ್ಗೆ ಸಭೆಯಲ್ಲಿ ಹಾಜರಿದ್ದ ಎಂಆರ್‌ಪಿಎಲ್ ಅಧಿಕಾರಿಗಳು ಸಮಾಲೋಚನೆ ನಡೆಸಿ ಆರ್ ಆಂಡ್ ಆರ್ ಸಮಿತಿಯಿಂದ ಅನುಮೋದನೆಗೊಂಡ ಉದ್ಯೋಗಾಕಾಂಕ್ಷಿಗಳ ಪಟ್ಟಿಯನ್ನು ಎಂಆರ್‌ಪಿಎಲ್‌ಗೆ ಸಲ್ಲಿಸಿದ ದಿನಾಂಕದಿಂದ ಆರು ತಿಂಗಳೊಳಗಾಗಿ ಉದ್ಯೋಗ ನೀಡಬೇಕೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರುಗಳಾದ ಉಮಾನಾಥ ಎ. ಕೋಟ್ಯಾನ್, ಡಾ.ಭರತ್ ಶೆಟ್ಟಿ ವೈ. ಮತ್ತು ಜಿಲ್ಲಾಧಿಕಾರಿ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಕಾರಣಕ್ಕೂ ವಂಶವೃಕ್ಷ ಮತ್ತು ನಿರಾಕ್ಷೇಪಣಾ ಪತ್ರವನ್ನು ತರಲು ಒತ್ತಾಯಿಸದೆ, ಅರ್ಜಿಯನ್ನು ಪಡೆದುಕೊಳ್ಳುವಂತೆ ಕೆಪಿಟಿ ಸಂಸ್ಥೆಯ ಪ್ರಾಂಶುಪಾಲರಿಗೆ ಸೂಚಿಸಿದರು.
ನಗದು ಪರಿಹಾರ
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಹೊಸತಾಗಿ ಆರ್ ಆಂಡ್ ಆರ್ ಕಾಲನಿಯನ್ನು ರಚಿಸಬೇಕಾದರೆ ತುಂಬಾ ಸಮಯ ತಗಲುತ್ತದೆ. ಇದರಿಂದ ನಿರ್ವಸಿತರಿಗೆ ಉದ್ಯೋಗ ಮತ್ತಿತರ ಸವಲತ್ತುಗಳನ್ನು ನೀಡಲು ತುಂಬಾ ವಿಳಂಬವಾಗುತ್ತದೆ. ಹಾಗಾಗಿ ನಿರ್ವಸಿತರ ಮನವೊಲಿಸಿ ನಿವೇಶನಕ್ಕಾಗಿ ಬೇಡಿಕೆ ಸಲ್ಲಿಸದೆ ನಗದು ಪರಿಹಾರವನ್ನೇ ಆಯ್ದುಕೊಳ್ಳುವಂತೆ ಕೋರಿಕೊಂಡರು. ಉದ್ಯೋಗ ಮತ್ತಿತರ ಸವಲತ್ತುಗಳಿಗೆ ಸಂಬಂಧಿಸಿದಂತೆ ಎಲ್ಲ ಅರ್ಹ ನಿರ್ವಸಿತರು ಡಿಸೆಂಬರ್ 15ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ, ಕಾರ್ಯಪಾಲಕ ಅಭಿಯಂತರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ, ಎಂಆರ್‌ಪಿಎಲ್ ಅಧಿಕಾರಿಗಳು, ಎಂಆರ್‌ಪಿಎಲ್ 4ನೇ ಹಂತದ ನಿರ್ವಸಿತರ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ ಕುತ್ತೆತ್ತೂರು, ಕಾರ್ಯದರ್ಶಿ ಕೇಶವ ಶೆಟ್ಟಿ ಕುತ್ತೆತ್ತೂರು, ಕೃಷ್ಣಮೂರ್ತಿ ಕುತ್ತೆತ್ತೂರು, ರೊನಾಲ್ಡ್ ಫೆರ್ನಾಂಡಿಸ್ ಪೆರ್ಮುದೆ, ಜಿ.ಕೆ.ಪೂವಪ್ಪಪೆರ್ಮುದೆ, ಮಾರ್ಕೋ ಡಿಸೋಜ ಪೆರ್ಮುದೆ, ಸಂದೇಶ್ ಪೂಜಾರಿ, ಲಲಿತಾ ಪೆರ್ಮುದೆ ಮತ್ತಿತರರು ಉಪಸ್ಥಿತರಿದ್ದರು.