×
Ad

ಮಂಗಳೂರು: ನಾಳೆ ನಾರಾಯಣ- ಗಾಂಧಿ ಸಂವಾದ ಶತಮಾನೋತ್ಸವ, ಸರ್ವಮತ ಸಮ್ಮೇಳನ

Update: 2025-12-01 23:16 IST

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವದ ಅಂಗವಾಗಿ ಡಿ.೩ರಂದು ಕೊಣಾಜೆ ಮಂಗಳಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶ್ರೀಮಹಾಗುರುವಿನ ಮಹಾ ಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನ ಶತಮಾನೋತ್ಸವ ಜರುಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೇರಳದ ವರ್ಕಳದ ಶಿವಗಿರಿ ಮಠ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ ಡಿ.೩ರಂದು ಬೆಳಗ್ಗೆ ೯:೩೦ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಕಲ ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿ ಆಶೀರ್ವಚನ ನೀಡುವರು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಸಭೆಯ ಅಧ್ಯಕ್ಷ ತೆ ವಹಿಸಲಿದ್ದಾರೆ. ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಗಾಂಧಿ ಸಮಾಗಮ ಸಂದೇಶದ ಪ್ರಧಾನ ಭಾಷಣ ಮಾಡುವರು. ಶಿವಗಿರಿ ಮಠದ ಕಾರ್ಯದರ್ಶಿ ಸ್ವಾಮೀಜಿ ಶುಭಾಂಗಾನಂದ ಪರಿನಿರ್ವಾಣ ಸಂದೇಶ ಭಾಷಣ ನೀಡುವರು ಎಂದು ಹೇಳಿದರು.

ಶಿವಗಿರಿ ಮಠದ ಶಾರದಾನಂದ, ಸ್ವಾಮಿ ರಿತಾಂಭರಾನಂದ, ಸ್ವಾಮಿ ಆಸಂಗಾನಂದ ಗಿರಿ, ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾನಂದಜಿ ಮಹಾರಾಜ ಉಪಸ್ಥಿತರಿರುವರು.

ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಝಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ಮಂಗಳೂರು ವಿವಿ ಕುಲಪತಿಪ್ರೊ.ಪಿ.ಎಲ್.ಧರ್ಮ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.

ಪಾಣಕ್ಕಾಡ್ ಮುನವ್ವರ್ ಅಲಿ ತಂಙಳ್, ಮಂಗಳೂರು ಬಿಷಪ್ ಡಾ.ಪೀಟರ್ ಪಾಲ್ ಸಲ್ಡಾನ, ಬೆಳ್ತಂಗಡಿ ಬಿಷಪ್ ಜೇಮ್ಸ್ ಪಟ್ಟೆರಿಲ್, ಬ್ರಹ್ಮಕುಮಾರಿ ವೀಣಾ ಬೆಹನ್‌ಜಿ, ಗೋಕುಲಂ ಗ್ರೂಪ್ ಅಧ್ಯಕ್ಷ ಗೋಕುಲ್, ಗೋಪಾಲನ್, ಕೆ.ಜಿ.ಬಾಬು ರಾಜ್ ಬಹರೈನ್, ರಾಜಧಾನಿ ಗ್ರೂಪ್ ಅಧ್ಯಕ್ಷ ಡಾ.ಬಿಜು ರಮೇಶ್, ಮೆಡಿಮಿಕ್ಸ್ ಅಧ್ಯಕ್ಷ ಎ.ವಿ.ಅನೂಪ್, ಕೇರಳದ ಮಾಜಿ ಡಿಜಿಪಿ ಟಿ.ಪಿ.ಸೆನ್‌ಕುಮಾರ್, ಶಾಸಕರಾದ ವಿ.ಸುನೀಲ್ ಕುಮಾರ್, ಉಮಾನಾಥ ಎ. ಕೋಟ್ಯಾನ್ ಮತ್ತು ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ಡಿ. ಕುಂದರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದವರು ತಿಳಿಸಿದ್ದಾರೆ.

ಸರ್ವಮತ ಸಮ್ಮೇಳನ: ಅಂದು ಅಪರಾಹ್ನ ೨ರಿಂದ ೪ರವರೆಗೆ ಸರ್ವಮತ ಸಮ್ಮೇಳನ ನಡೆಯಲಿದೆ. ಖ್ಯಾತ ಸಂಸ್ಕೃತಿ ಚಿಂತಕ ಗಣೇಶದೇವಿ ಸಮ್ಮೇಳನ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಮತ್ತು ಕಾರ್ಯಕ್ರಮದ ಕೇಂದ್ರ ಸಮಿತಿಯ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಧ್ಯಕ್ಷತೆಯಲ್ಲಿ ಶಿವಗಿರಿ ಮಠದ ಸ್ವಾಮಿ ರಿತಾಂಭರಾನಂದ ಸರ್ವಮತ ಸಂದೇಶ ಭಾಷಣ ನೀಡುವರು.

ರಾಜಕೀಯ ರಹಿತ ಕಾರ್ಯಕ್ರಮ: ಈ ಶತಮಾನೋತ್ಸವ ಆಚರಣೆಯು ಮಾನವ ಸಹೋದರತೆ, ಧಾರ್ಮಿಕ ಸಹಿಷ್ಣುತೆ, ಸತ್ಯ- ಅಹಿಂಸೆಯ ಮೌಲ್ಯಗಳನ್ನು ಮತ್ತೆ ನೆನಪಿಸುವ ವೇದಿಕೆಯಾಗಲಿದೆ. ಪ್ರಸಕ್ತ ಕಾಲಘಟ್ಟದಲ್ಲಿ ನಾರಾಯಣ ಗುರುಗಳ ಅನುಯಾಯಿಗಳು ಗುರುಗಳ ಗುರುಗಳ ತತ್ವ ಸಿದ್ಧಾಂತಗಳನ್ನು ಮನವರಿಕೆ ಮಾಡುವ ಪ್ರಯತ್ನ ಈ ಮೂಲಕ ನಡೆಯುತ್ತಿದೆ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಪಿ.ವಿ.ಮೋಹನ್, ಗೌರವ ಉಪಾಧ್ಯಕ್ಷರಾದ ಜಯರಾಜ್ ಸೋಮ ಸುಂದರಂ, ನವೀನ್‌ಚಂದ್ರ ಡಿ. ಸುವರ್ಣ, ಮಂಜುನಾಥ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಆರ್., ಸತ್ಯಜಿತ್ ಸುರತ್ಕಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News