×
Ad

ಪುದು ಗ್ರಾಮ ಪಂಚಾಯತ್‌ನಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಪದಗ್ರಹಣ

Update: 2025-10-13 22:09 IST

ಫರಂಗಿಪೇಟೆ : ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಸೌಹಾರ್ದತೆ ನಿರ್ಮಾಣಕ್ಕೆ ನಮ್ಮ ಅಧಿಕಾರಾವಧಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಪುದು ಗ್ರಾ ಪಂ ನೂತನ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹೇಳಿದ್ದಾರೆ.

2ನೇ ಬಾರಿಗೆ ಪುದು ಗ್ರಾ ಪಂ ಅಧ್ಯಕ್ಷರಾಗಿ ಅ.13 ರಂದು ಅಧಿಕಾರ ಪದಗ್ರಹಣ ಮಾಡಿ ಮಾತನಾಡಿದ ಅವರು, ಈಗಾಗಲೇ ಕಳೆದ ಬಾರಿ ಅಧ್ಯಕ್ಷನಾಗಿ ಅಧಿಕಾರದಲ್ಲಿದ್ದ ವೇಳೆ ಮಂಗಳೂರು ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ಬಿಟ್ಟರೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ಮನೆ ಮನೆ ಕಸ-ತ್ಯಾಜ್ಯ ಸಂಗ್ರಹಿಸಲು ವಿಲೇವಾರಿ ನಡೆಸಲು ವಾಹನ ವ್ಯವಸ್ಥ ಕಲ್ಪಿಸಿದ ಕೀರ್ತಿ ಪುದು ಪಂಚಾಯತಿಗಿದೆ ಎಂದರು.

ಈ ಬಾರಿಯೂ ಕ್ಷೇತ್ರದ ಶಾಸಕರೂ, ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರ ಸಲಹೆ ಮೇರೆಗೆ, ಪಂಚಾಯತ್ ಅಧಿಕಾರಿ-ಸಿಬ್ಬಂದಿ ವರ್ಗ, ಸದಸ್ಯರುಗಳು ಹಾಗೂ ಗ್ರಾಮಸ್ಥರ ಜೊತೆ ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು.

ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಮಾತನಾಡಿ, ಕ್ಷೇತ್ರದ ಶಾಸಕ, ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರ ಸಹಕಾರದಿಂದ ಪುದು ಗ್ರಾಮದಲ್ಲಿ ಈಗಾಗಲೇ ಹಲವಾರು ಅಭಿವೃದ್ದಿ ಕಾರ್ಯಗಳು ನೆರವೇರಿದ್ದು, ಮುಂದೆಯೂ ಶಾಸಕರ ಸಹಕಾರದಿಂದ ಇನ್ನಷ್ಟು ಅಭಿವೃದ್ದಿ ಕಾರ್ಯಗಳು ರಮ್ಲಾನ್ ನೇತೃತ್ವದ ಪಂಚಾಯತ್ ಆಡಳಿತದಲ್ಲಿ ಆಗಬೇಕಾಗಿದೆ. ರಾಜಕೀಯ ಚುನಾವಣೆ ಸಂದರ್ಭಕ್ಕೆ ಮಾತ್ರ ಸೀಮಿತವಾಗಿರಬೇಕು. ಅಧಿಕಾರಕ್ಕೆ ಬಂದ ಬಳಿಕ ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುವ ಮೂಲಕ ಸೇವೆ ಸಲ್ಲಿಸಬೇಕು. ಅಭಿವೃದ್ದಿಯಲ್ಲಿ ತಾರತಮ್ಯ ಮಾಡುವಂತಾಗಬಾರದು. ಗ್ರಾಮಸ್ಥರ ಸಹಕಾರ ಪಡೆದು ಗ್ರಾಮದ ಅಭಿವೃದ್ದಿಯಾಗಲಿ. ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಬೇಕು. ಜನರ ನೆಮ್ಮದಿಗೆ ಆದ್ಯತೆ ನೀಡುವಂತಾಗಬೇಕು. ಆಡಳಿತ-ಅಧಿಕಾರಿ ವರ್ಗ ಹೊಂದಾಣಿಕೆಯಿಂದ ಇದ್ದರೆ ಗ್ರಾಮದ ಅಭಿವೃದ್ದಿಗೆ ವೇಗ ದೊರೆಯುತ್ತದೆ ಎಂದರು.

ಇದೇ ವೇಳೆ ನಿರ್ಗಮನ ಅಧ್ಯಕ್ಷೆ ರಶೀದಾ ಬಾನು ಹಾಗೂ ಉಪಾಧ್ಯಕ್ಷ ಇಕ್ಬಾಲ್ ಸಜೀರ್ ಅವರು ನೂತನ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಉಪಾಧ್ಯಕ್ಷೆ ರಕ್ಸಾನಾ ಬಾನು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪುದು ಪಂಚಾಯತಿನಲ್ಲಿ ಐದು ವರ್ಷಗಳ ಕಾಲ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಕೊಳ್ನಾಡು ಪಂಚಾಯತಿಗೆ ವರ್ಗಾವಣೆಗೊಂಡಿರುವ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹರೀಶ್ ಕೆ ಎ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ನೂತನ ಪಿಡಿಒ ಆಗಿ ನೇಮಕಗೊಂಡಿರುವ ಡಾ.ಸ್ಮೃತಿ ಅವರನ್ನು ಸ್ವಾಗತಿಸಿ ಗೌರವಿಸಲಾಯಿತು.

ಪುದು ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ, ಮೇರಮಜಲು ಗ್ರಾ ಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ವೃಂದಾ ಪೂಜಾರಿ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಬಂಟ್ವಾಳ ತಾಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶಮೀರ್ ಫಜೀರ್, ಅಮ್ಮೆಮಾರು ಮಸೀದಿ ಅಧ್ಯಕ್ಷ ಅಬೂಸಾಲಿಹ್ ಮುಸ್ಲಿಯಾರ್, ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಹಸನಬ್ಬ, ಪ್ರಮುಖರಾದ ಎಫ್ ಎ ಖಾದರ್, ಅಬ್ದುಲ್ ಖಾದರ್, ಸುಜೀರ್-ಬದಿಗುಡ್ಡೆ, ಅಬೂಬಕ್ಕರ್ ಖಾಝಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.

ಪಿಡಿಒ ಡಾ.ಸ್ಮೃತಿ ಸ್ವಾಗತಿಸಿ, ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಗ್ರಾಮಸ್ಥರ ಪರವಾಗಿ ಮನೋಜ್ ಆಚಾರ್ಯ ಹಾಗೂ ನಝೀರ್ ಕುಂಜತ್ಕಲ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News