ನೆಮ್ಮದಿಯ ಬದುಕಿಗೆ ಕುಟುಂಬ ವ್ಯವಸ್ಥೆಗಳು ನೆರವು: ಡಾ. ಬಿನೋ ಥಾಮಸ್
ಮಂಗಳೂರು : ವ್ಯಕ್ತಿಯಲ್ಲಿ ಉಂಟಾಗುವ ಅನಿಶ್ಚಿತತೆಗಳನ್ನು ದೂರವಾಗಿಸಿ ನೆಮ್ಮದಿಯಿಂದ ಬದುಕುವಲ್ಲಿ ಕುಟುಂಬ ವ್ಯವಸ್ಥೆಗಳು ನೆರವಾಗುತ್ತದೆ. ಕುಟುಂಬಗಳು ಎದುರಿಸುತ್ತಿರುವ ಸಮಕಾಲೀನ ಸವಾಲುಗಳಿಗೆ ವ್ಯವಸ್ಥೆಯಲ್ಲಿನ ಬದಲಾವಣೆಗಳು ಕಾರಣವಾಗಿದ್ದು, ವೃತ್ತಿಪರವಾಗಿ ಅವುಗಳನ್ನು ನಿವಾರಿಸುವಲ್ಲಿ ಪ್ರಯತ್ನ ಪಡಬೇಕಾದ ಅಗತ್ಯವಿದೆ ಎಂದು ಬೆಂಗಳೂರಿನ ನಿಮ್ಹಾನ್ಸ್ ಮನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿನೋ ಥಾಮಸ್ ಹೇಳಿದರು.
ನಗರದ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್‌ವರ್ಕ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ‘ಕುಟುಂಬ ಕೇಂದ್ರಿತ ಸಮಾಜ ಕಾರ್ಯ ವಿಧಾನದ ಮೌಲ್ಯೀಕರಣ: ಸಮಕಾಲೀನ ಸವಾಲುಗಳು’ ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ‘ಸ್ಪಂದನ 2023’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ದಿಕ್ಸೂಚಿ ಭಾಷಣಗೈದ ನ್ಯಾಯವಾದಿ ಕರುಣಾ ಎಸ್.ಜಿ. ’ವಸುದೈವ ಕುಟುಂಬಕಂ’ ಎನ್ನುವ ಮೂಲಕ ವಿಶ್ವವೇ ಒಂದು ಕುಟುಂಬ ಎನ್ನುವ ಪರಿಕಲ್ಪನೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟು ಹಾಕಲಾಗಿವೆ. ಇದನ್ನು ಪಾಲಿಸಿಕೊಂಡು ಹೋಗುವಲ್ಲಿ ಕೆಲವು ಸವಾಲುಗಳು ಎದುರಾಗುತ್ತದೆ. ಕುಟುಂಬದ ವ್ಯವಸ್ಥೆ ಯಶಸ್ವಿಯಾಗಬೇಕಾದಲ್ಲಿ ಮಹಿಳಾ ಸಬಲೀಕರಣ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಸೋಫಿಯಾ ಎನ್. ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಡಾ. ಜೆನಿಸ್ ಮೇರಿ, ಸೋಶಿಯಲ್ ವರ್ಕ್ ವಿಭಾಗದ ಮುಖ್ಯಸ್ಥೆ ಪ್ರೊ.ಇವ್ಲಿನ್ ಬೆನ್ನಿಸ್, ವಿದ್ಯಾರ್ಥಿ ಸಂಘಟಕಿ ಸೋನಾ ಪ್ರಕಾಶ್ ಉಪಸ್ಥಿತರಿದ್ದರು.
ಪಿ.ಜಿ. ಸೋಶಿಯಲ್ ವರ್ಕ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಅನುರಾಧಾ ಶೆಟ್ಟಿ ಸ್ವಾಗತಿಸಿದರು, ಕಾರ್ಯಕ್ರಮ ಸಂಘಟಕಿ ಜಿನ್‌ಸಾ ಜೋಸೆಫ್ ವಂದಿಸಿದರು.