ಸ್ವಾವಲಂಬನೆ ಬಾಲ್ಯದಿಂದಲೇ ಪ್ರಾರಂಭವಾಗಬೇಕು: ಕೆ ಪಿ ಶೆಣೈ
ಕಾರ್ಕಳ: ಜೀವನವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ವಿದ್ಯಾರ್ಥಿ ಜೀವನದಲ್ಲಿಯೇ ನಿರ್ಣಯಿಸಬೇಕು. ಇಂದು ಹಾರ್ಡ್ವೇರ್, ಸಾಫ್ಟ್‌ವೇರ್, ತಾಂತ್ರಿಕ ಶಿಕ್ಷಣಗಳನ್ನು ಬಿಟ್ಟು ಕೃಷಿಯ ಕಡೆಗೆ ಒಲವು ತೋರಿ, ಕೃಷಿಯ ಉತ್ಪಾದನೆಯಲ್ಲಿ ತೊಡಗಿ ಸ್ವಾವಲಂಬನೆಯ ಬದುಕನ್ನು ಕಾಣಬಹುದು. ಇಂತಹ ಸ್ವಾವಲಂಬನೆ ಬಾಲ್ಯದಿಂದಲೇ ಪ್ರಾರಂಭವಾಗಬೇಕು ಎಂದು ಎಸ್.ವಿ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಕೆ ಪಿ ಶೆಣೈ ಹೇಳಿದರು.
ಅವರು ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರದ ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ವೆಲೇರಿಯನ್ ಲೋಬೊ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.
ನಿವೃತ್ತ ಪ್ರಾಂಶುಪಾಲೆ ಹಾಗೂ ಸಾಹಿತಿ ಶ್ಯಾಮಲಾ ಕುಮಾರಿ ಬೇವಿಂಜೆ ಮಾತನಾಡಿ, ವಿದ್ಯಾರ್ಥಿ ಜೀವನವೇ ಅತ್ಯಂತ ಅಮೂಲ್ಯವಾದದ್ದು. ವಿದ್ಯಾಭ್ಯಾಸದ ಜೊತೆ ಜೊತೆಗೆ ಸ್ವ ಸಾಮರ್ಥ್ಯದ ವ್ಯಕ್ತಿತ್ವದ ಅಭಿವೃದ್ಧಿಗೆ ಆತ್ಮ ವಿಶ್ವಾಸದಿಂದ ಇಂತಹ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಾಮದಾಸ ಪ್ರಭು, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕಿ ಸರಸ್ವತಿ, ದೈಹಿಕ ಶಿಕ್ಷಕಿ ಪ್ರಿಯಾ ಪ್ರಭು, ಹಿಂದಿ ಭಾಷಾ ಶಿಕ್ಷಕಿ ಪ್ರಭಾ ಜಿ ಪ್ರತಿಭಾ ಪುರಸ್ಕಾರದ ಪಟ್ಟಿಯನ್ನು ವಾಚಿಸಿದರು.
ಉಪನ್ಯಾಸಕಿ ಸುಧಾ ಭಟ್ ನಿರೂಪಿಸಿದರು. ಶಿಕ್ಷಕ ಸುನಿಲ್ ಎಸ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ಪ್ರಭಾತ್ ರಂಜನ್ ವಂದಿಸಿದರು.