×
Ad

ಸುರತ್ಕಲ್‌: ಟೋಲ್‌ ಗೇಟ್‌ ವಿರುದ್ಧ ಹೋರಾಟ ಸಮಿತಿ, ಸಮಾನ ಮನಸ್ಕ ಸಂಘಟನೆಗಳಿಂದ ಸಂಭ್ರಮಾಚರಣೆ

Update: 2023-12-01 23:09 IST

ಸುರತ್ಕಲ್‌: ಇಲ್ಲಿನ ಎನ್‌ಐಟಿಕೆ ಟೋಲ್‌ ಗೇಟ್‌ ನಲ್ಲಿ ಸುಂಕ ಸಂಗ್ರಹ ರದ್ದುಗೊಂಡು ಒಂದು ವರ್ಷವಾದ ಹಿನ್ನೆಲೆಯಲ್ಲಿ ಡಿ.1ರಂದು ಟೋಲ್‌ ಗೇಟ್‌ ವಿರುದ್ಧ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳಿಂದ ಸಂಭ್ರಮಾಚರಣೆ ಮತ್ತು ಹೆದ್ದಾರಿ ಸಂಬಂಧ ಇನ್ನೂ ನನೆಗುದಿಗೆ ಬಿದ್ದಿರುವ ಮತ್ತು ಅವೈಜ್ಞಾನಿಕ ಕಾಮಗಾರಿಗಳ ಕುರಿತು ಜನಾಗ್ರಹ ಸಭೆಯು ಶುಕ್ರವಾರ ಟೋಲ್‌ ಗೇಟ್‌ ಬಳಿ ನಡೆಯಿತು.

ಈ ಸಂದರ್ಭ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವರು ಮತ್ತು ಕಾಪು ವಿಧಾನ ಸಭಾಕ್ಷೇತ್ರದ ಮಾಜಿ ಶಾಸಕರಾದ ವಿನಯಕುಮಾರ್‌ ಸೊರಕೆ ಅವರು, ಸುರತ್ಕಲ್‌ ಟೋಲ್‌ ಗೇಟಿನ ಹೋರಾಟ ಒಂದು ಇತಿಹಾಸ. ಒಂದು ರಸ್ತೆಯ 60 ಕಿ. ಮೀಟರ್‌ ಒಳಗೆ ಎರಡೆರಡು ಕಡೆ ಟೋಲ್‌ ಶುಲ್ಕ ಸಂಗ್ರಹದ ಹೆಸರಿನಲ್ಲಿ ಜನಸಾಮಾನ್ಯರ ರಸ್ತ ಹೀರುವ ಕೆಲಸಗಳಾಗುತ್ತಿತ್ತು. ಇದನ್ನು ಪ್ರತಿಭಟಿಸಿ ಮುನೀರ್‌ ಕಾಟಿಪಳ್ಗಳ ಅವರ ನೇತೃತ್ವದಲ್ಲಿ ಜಾತ್ಯತೀತ ಸಿದ್ದಾಂತ ಮನೋಭಾ ವದ ಎಲ್ಲ ಜನರೂ ಸೇರಿಕೊಂಡು ಪ್ರಭಲವಾದ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರ ಟೋಲ್‌ ಗೇಟ್‌ನಲ್ಲಿ ಸುಂಕ ಪಡೆಯುತ್ತಿದ್ದುದನ್ನು ನಿಲ್ಲಿಸಿತು. ಆದರೆ, ಅದರ ಅವಶೇಷಗಳು ಇನ್ನೂ ಹಾಗೇ ಇವೆ. ಟೋಲ್‌ ಸಂಗ್ರಹವನ್ನು ಪಡುಬಿದ್ರೆಗೆ ವಿಲೀನ ಮಾಡುವುದಾಗಿ ಹೇಳಿ ಅಲ್ಲಿ ಸುಂಕ ಹೆಚ್ಚಿಸಲು ಯತ್ನಿಸಿದರು. ಅಲ್ಲೂ ಪ್ರತಿಭಟನೆಗಳು ಆರಂಭವಾದ ಪರಿಣಾಮಾಮ ಅದನ್ನು ಕೈಬಿಟ್ಟಿದ್ದಾರೆ. ಇನ್ನು ಮುಂದೆಯೂ ಇಲ್ಲಿನ ಟೋಲ್‌ ದರವನ್ನು ಯಾವ ಟೋಲ್‌ ಗೇಟ್ಗಳಲ್ಲಿ ಪಡೆಯಲು ನಾವು ಬಿಡುವುದಿಲ್ಲ. ಕೇಂದ್ರ ಸರಕಾರ ಇಲ್ಲಿ ಮತ್ತೆ ಟೋಲ್‌ ಗೇಟ್‌ ತೆರೆಯಲಿದೆ ಎಂಬ ಮಾತುಗಳಿದ್ದು, ಅದಕ್ಕೆ ರಾಜ್ಯ ಸರಕಾರದಿಂದ ಅವಕಾಶ ನೀಡಲು ನಾವು ಬಿಡುವುದಿಲ್ಲ. ಈ ಕುರಿತು ಸಚಿವರಾದ ಸತೀಶ್‌ ಜಾರಕಿ ಹೊಳಿ, ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದರು.

ಟೋಲ್‌ ಗೇಟ್‌ ಸಂಭ್ರಮಾಚರಣೆ ವೇಳೆ ಜನಾಗ್ರಹ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಿ ಮಾತನಾಡಿದ ಟೋಲ್‌ ಗೇಟ್‌ ತೆರವು ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ, ಟೋಲ್‌ ಗೇಟ್‌ ನ ಅವಶೇಷಗಳನ್ನು ಅಪಾಯಕರ ರೀತಿಯಲ್ಲಿದ್ದು, ಅವುಗಳನ್ನು ತೆರವು ಮಾಡದೇ ಬಿಡಲಾಗಿದೆ. ನಂತೂರ್‌ - ಮುಕ್ಕವರೆಗಿನ ರಾಷ್ಟ್ರೀಯ ಹೆದ್ದಾರಿ ಮರಣದ ದಾರಿಯಾಗಿ ಪರಿವರ್ತನೆಯಾಗಿದೆ. ಅಪಘಾತ, ಸಾವು ನೋವುಗಳು ಸಂಭವಿಸುತ್ತಿವೆ. ನಿರ್ಮಿಸಲಾದ ರಸ್ತೆ ಅವೈಜ್ಞಾನಿಕವಾಗಿದೆ. ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆ, ಸೂಕ್ತ ಚರಂಡಿ ಸೇರಿದಂತೆ ಮೂಲ ಸೌಕರ್ಯಗಳೇ ಇಲ್ಲ. ಹೆದ್ದಾರಿ ನಿರ್ಮಾಣದ ವೇಳೆ ಹಗರಣಗಳು ನಡೆದಿವೆ. ಇದಕ್ಕೆ ಸಂಸದ ನಳಿನ ಕುಮಾರ್‌ ಕಟೀಲ್‌ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೇರ ಹೊಣೆ ಎಂದು ಅವರು ಆರೋಪಿಸಿದರು.

ಬಳಿಕ ಮಾತನಾಡಿದ ಸಾಮಾಜಿಕ ಹೋರಾಟಗಾರ ಎಂ.ಜಿ. ಹೆಗಡೆ ಅವರು, ಇದು ಟೋಲ್‌ ರಸ್ತೆಯಲ್ಲ, ಇದು ದ್ವಿಪಥ ರಾಷ್ಟ್ರೀಯ ಹೆದ್ದಾರಿ. ಟೋಲ್‌ ನೀಡಬೇಕಾದ ಯಾವುದೇ ಗುಣ ಲಕ್ಷ್ಯಣಗಳು ಈ ಹೆದ್ದಾರಿಯಲ್ಲಿ ಇಲ್ಲ. ಇಲ್ಲಿ ದ್ವಿಪಥ ಮೇಲ್ಸೇತುವೆಗಳಿಲ್ಲ. ಸರ್ವಿಸ್‌ ರಸ್ತೆಗಳಿಲ್ಲ. ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಹಾಗಾಗಿ ಇದು ಟೋಲ್ ರಸ್ತೆಯಲ್ಲ. ಎಂಎಂಪಿಎಯವರು ಅವರ ಸರಕು ಸಾಗಣೆಯ ಲಾರಿಗಳ ಸಂಚಾರಕ್ಕಾಗಿ ಮಾಡಿರುವ ರಸ್ತೆಯಷ್ಟೇ. ಹಾಗಾಗಿ ಹೆದ್ದಾರಿ ನಿರ್ಮಾಣಕ್ಕೆ ಮಾಡಿರುವ ಖರ್ಚನ್ನು ಎಂಎಂಪಿಎ ಅವರಿಂದ ಪಡೆದುಕೊಳ್ಳಲಿ. ಇದನ್ನು ಟೋಲ್‌ ಮುಕ್ತ ರಸ್ತೆ ಮಾಡಬೇಕು. ಮಂಗಳೂರು ಟೋಲಗೇಟ್‌ ಗಳ ಪ್ರವಾಸಿ ತಾಣದತ್ತ ಸಾಗುತ್ತಿದೆ. ದ.ಕ. ಜಿಲ್ಲೆಗೆ ಮುಂದಿನ ದಿನಗಳಲ್ಲಿ 20 ಟೋಲ್‌ ಗೇಟ್‌ಗಳು ಬರಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಜನ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಸಭೆಯಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್‌, ಇನಾಯತ್‌ ಅಲಿ, ಮಿಥುನ್‌ ರೈ, ಪದ್ಮರಾಜ್‌, ಪ್ರತಿಭಾ ಕುಳಾಯಿ, ಪುಷೋತ್ತಮ ಚಿತ್ರಾಪುರ, ವಸಂತ್‌ ಬರ್ನಾರ್ಡ್‌, ಮೊಯ್ದೀನ್‌ ಬಾವ, ಸಿಪಿಎಂ ಮುಖಂಡರಾದ ಶೇಖರ್‌, ಯಾದವ ಶೆಟ್ಟಿ, ಸುನಿಲ್‌ ಕುಮಾರ್‌ ಬಜಾಲ್‌, ಶ್ರೀನಾಥ್ ಕುಲಾಲ್‌, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯ್ಕ್‌, ದಲಿತ ಸಂಘಟನೆಗಳ ಮುಖಂಡರಾದ ಶೇಖರ ಹೆಜಮಾಡಿ, ದೇವದಾಸ್‌, ರಘು ಎಕ್ಕಾರು, ಹೋರಾಟ ಸಮಿತಿಯ ಟಿ.ಎನ್‌. ರಮೇಶ್‌, ರಾಘವೇಂದ್ರ ರಾವ್‌, ಮೋಹನ್‌ ಕೋಟ್ಯಾನ್‌, ರಮೇಶ್‌ ಕಾಂಚನ್‌ ಉಡುಪಿ, ಪಣಿರಾಜ್‌, ರಮೇಶ್‌ ಕೋಟ್ಯಾನ್‌, ಕಿಶನ್‌ ಹೆಗ್ಡೆ ಕೊಲ್ಕೆಬೈಲು, ಮೂಸಬ್ಬ ಪಕ್ಷಿಕೆರೆ, ರಾಜೇಶ್‌ ಪೂಜಾರಿ ಸುರತ್ಕಲ್‌, ಶ್ರೀಕಾಂತ್‌ ಸಾಲ್ಯಾನ್‌ ಮತ್ತು ಸಮಾನ ಮನಸ್ಕ ಸಂಘಟನೆಗಳ ಮುಖಂಡರು, ಟೋಲ್‌ ಗೇಟ್‌ ವಿರುದ್ಧ ಹೋರಾಟ ಸಮಿತಿಯ ಮುಖಂಡರು, ಪದಾಧಿಕಾರಿಗಳು ಮತ್ತು ನೂರಾರು ಸಮಾನ ಮನಸ್ಕ ನಾಗರೀಕರು ಭಾಗವಹಿಸಿದ್ದರು.

ದ.ಕ., ಉಡುಪಿ ಜಿಲ್ಲೆ ಟೋಲ್‌ ಗೇಟ್‌ಗಳ ಜಿಲ್ಲೆಯಾಗಿ ಪರಿವರ್ತನೆಯಾಗುತ್ತಿದೆ. ಬಿಸಿರೋಡ್‌ ನಿಂದ ಗುಂಡ್ಯ ವರೆಗೆ ಎರಡು ಟೋಲ್‌ ಗೇಟ್‌ ಗಳು ಬರಲಿವೆ. ಚಾರ್ಮಾಡಿಯಿಂದ ಬಿಸಿರೋಡ್‌ ವರೆಗಿನ ಹೆದ್ದಾರಿ ಅಗಲೀಕರಣವಾಗುತ್ತಿದ್ದು, ಅದಕ್ಕೂ ಎರಡು ಟೋಲ್‌ ಗೇಟ್‌ಗಳು ಹಾಕುವ ಸಾದ್ಯತೆ ಇದೆ. ನಂತೂರಿನಿಂದ ಕಾರ್ಕಳಕ್ಕೆ ಹೋಗುವ ರಸ್ತೆಗೆ ಅಗಲೀಕರಣವಾಗಿ ಅದಕ್ಕೂ ಒಂದು ಟೋಲ್‌ ಗೇಟ್‌ ಬರಲಿದೆ. ಪಡುಬಿದ್ರೆಯಿಂದ ಕಾರ್ಕಳ ರಸ್ತೆಗೆ ಈಗಾಗಲೇ ಟೋಲಗೇಟ್ ನ ಪ್ರಸ್ತಾಪ ಅರ್ಧದಲ್ಲಿ ನಿಂತಿದೆ. ಹಿರಿಯಡ್ಕಯಿಂದ ಆಗುಂಬೆ ರಸ್ತೆ ಅಗಲೀಕರಣವಾಗುತ್ತಿದೆ ಅದಕ್ಕೂ ಟೋಲ್‌ ಗೇಟ್‌ ಬರಲಿದೆ. ಎಲ್ಲಾ ಕಡೆ ಟೋಲ್‌ ಗೇಟ್‌ ತುಂಬಿಹೋದರೆ ಜನರು ಸಂಚಾರ ಮಾಡುವುದಾದರೂ ಹೇಗೆ? ನಮ್ಮ ದುಡಿಮೆಯಲ್ಲಿ ಪೆಟ್ರೋಲ್‌ ಡೀಸೆಲ್‌ ಗಿಂತಲೂ ನಾಲ್ಕು ಪಟ್ಟು ಅಧಿಕ ಟೋಲ್‌ ಸುಂಕ ಕಟ್ಟಿದರೆ ನಮ್ಮ ಜೀವನ ಹೇಗೆ ಎಂದು ಮುನೀರ್‌ ಕಾಟಿಪಳ್ಳ ಪ್ರಶ್ನಿಸಿದರು.

ಇಂತಹಾ ಟೋಲ್‌ ಗೇಟ್‌ಗಳನ್ನು ಸರಕಾರ ತರಲು ಮುಂದಾಗುವಾಗ ನಮ್ಮ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ. ಕನಿಷ್ಠ ಹೆದ್ದಾರಿ ಪ್ರಾಧಿಕಾರ ಮತ್ತು ಸಂಬಂಧಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಸಭೆಗಳನ್ನು ನಡೆಸಿ ಬೇಕಾದಲ್ಲಿ ಮಾತ್ರ ಟೋಲ್‌ ಗೇಟ್‌ ಗಳನ್ನು ತರಬೇಕೆ ಹೊರತು ಬೇಕಾ ಬಿಟ್ಟಿ ಟೋಲ್‌ ಗೇಟ್‌ ಗಳನ್ನು ಮಂಜೂರು ಮಾಡಿಸಿಕೊಳ್ಳಬಾರದು ಎಂದು ಹೇಳಿದರು.








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News