ಸುಬ್ರಹ್ಮಣ್ಯ- ಸಕಲೇಶಪುರ ರೈಲ್ವೇ ಮಾರ್ಗ ವಿದ್ಯುದ್ದೀಕರಣ ಜೂನ್‌ಗೆ ಪೂರ್ಣ: ರೈಲ್ವೇ ಯೋಜನೆ ಪ್ರಗತಿ ಪರಿಶೀಲನಾ ಸಭೆ
ಮಂಗಳೂರು, ಡಿ.2: ಸುಬ್ರಹ್ಮಣ್ಯ- ಸಕಲೇಶಪುರ ಘಾಟ್ ಪ್ರದೇಶ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಮುಂದಿನ ಜೂನ್‌ನಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಮಂಗಳೂರು- ಬೆಂಗಳೂರು ನಡುವೆ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಮೈಸೂರು ಹೆಚ್ಚುವರಿ ವಿಭಾಗೀಯ ರೈಲ್ವೆ ಪ್ರಬಂಧಕಿ ಇ.ವಿಜಯಾ ಹೇಳಿದರು.
ನಗರದ ದಕ ಜಿಪಂ ಸಭಾಂಗಣದಲ್ಲಿ ಶನಿವಾರ ಸ್ಥಳೀಯ ಸಂಸದ ನಳೀನ್ ಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿದ ರೈಲ್ವೆ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರು ಬಂದರ್‌ನಲ್ಲಿ ಇದ್ದ ರೈಲು ಗೂಡ್ಸ್ ತಂಗುದಾಣ ವಿಭಾಗ ಉಳ್ಳಾಲಕ್ಕೆ ಸ್ಥಳಾಂತಗೊಂಡ ಹಿನ್ನೆಲೆಯಲ್ಲಿ ಮಂಗಳೂರು ಬಂದರ್‌ನಲ್ಲಿ ರೈಲ್ವೆ ಪ್ರದೇಶವನ್ನು ಪ್ರಯಾಣಿಕರ ರೈಲುಗಳ ದುರಸ್ತಿ ಹಾಗೂ ತಂಗುದಾಣವಾಗಿ ಬಳಸಲು ಉದ್ದೇಶಿಸಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಬಂದರ್ ನಡುವೆ ಪಾಂಡೇಶ್ವರದಲ್ಲಿ ಹಾದುಹೋಗುವ ಮುಖ್ಯ ರಸ್ತೆ ಇರುವ ಕಡೆ ಮೇಲ್ಸೇತುವೆ ನಿರ್ಮಿಸುವುದು ಸೂಕ್ತವಾಗಿದೆ ಎಂದು ಪಾಲಕ್ಕಾಡ್ ವಿಭಾಗ ಎಡಿಆರ್‌ಎಂ ತಿಳಿಸಿದರು.
ಪರಂಗಿಪೇಟೆಯಲ್ಲಿ ಮುಚ್ಚಿರುವ ರೈಲು ನಿಲ್ದಾಣವನ್ನು ಮತ್ತೆ ತೆರೆಯಬೇಕು ಮತ್ತು ಇಲ್ಲಿ ಇರುವ ರೈಲ್ವೆಯ 30 ಎಕರೆ ಜಾಗವನ್ನು ಅಭಿವೃದ್ಧಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಒತ್ತಾಯಿಸಿದರು.
ಶಿಕ್ಷಣ ಸಂಸ್ಥೆಗಳು ಮತ್ತು ಜನದಟ್ಟಣೆ ಅಧಿಕವಿರುವ ಈ ಭಾಗದಲ್ಲಿ ನಿಲ್ದಾಣ ಮರು ತೆರೆದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಪಾಲಕ್ಕಾಡ್ ವಿಭಾಗೀಯ ರೈಲ್ವೆ ಪ್ರಬಂಧಕ ಅರುಣ್ ಕುಮಾರ್ ಚತುರ್ವೇದಿ, ಹೆಚ್ಚುವರಿ ವಿಭಾಗೀಯ ರೈಲ್ವೆ ಪ್ರಬಂಧಕ ಜಯಕೃಷ್ಣನ್, ಕೊಂಕಣ ರೈಲ್ವೆ ಸೀನಿಯರ್ ರೀಜನಲ್ ಟ್ರಾಫಿಕ್ ಮ್ಯೇನೇಜರ್ ವಿನಯ ಕುಮಾರ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಅನಿಲ್ ಶಾಸ್ತ್ರಿ, ಸಾಮಾಜಿಕ ಕಾರ್ಯಕರ್ತರಾದ ಲಕ್ಷ್ಮೀನಾರಾಯಣ ಬಂಟ್ವಾಳ, ಅನಿಲ್ ಹೆಗ್ಡೆ, ರಾಮದಾಸ್ ಮುಂತಾದವರು ರೈಲ್ವೆ ಅಗತ್ಯಗಳ ಬಗ್ಗೆ ಚರ್ಚಿಸಿದರು. ಪ್ರವಾಸೋದ್ಯಮ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಮಾಣಿಕ್ಯ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರು ಸೆಂಟ್ರಲ್ 4 ಮತ್ತು 5 ನೇ ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ. ಮಂಗಳೂರು- ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ತಿಂಗಳಾಂತ್ಯ ಚಾಲನೆ ದೊರೆಯಬಹುದು ಎಂದು ಸಭೆಯ ಬಳಿಕ ಸಂಸದ ನಳಿನ್ ಕುಮಾರ್‌ತಿಳಿಸಿದರು.
ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು ಉದ್ಘಾಟನೆ ಬಳಿಕ ಮುಂಬೈ ಸಿಎಸ್‌ಟಿ- ಮಂಗಳೂರು ಜಂಕ್ಷನ್, ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ- ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್, ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಹಗಲು ರೈಲು ಹಾಗೂ ಮಂಗಳೂರು ಜಂಕ್ಷನ್- ವಿಜಯಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.