ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಧರಣಿ
ಮಂಗಳೂರು: ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಗಳ ಅತಿಥಿ ಉಪನ್ಯಾಸಕರು ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ(ರಿ) ದ.ಕ. ಜಿಲ್ಲೆ ಇದರ ನೇತೃತ್ವದಲ್ಲಿ ಗುರುವಾರ ನಗರದ ಟವರ್ ಬಳಿ ಧರಣಿ ನಡೆಸಿದರು.
ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಧೀರಜ್ ಕುಮಾರ್ ,ಉಪಾಧ್ಯಕ್ಷೆ ಡಾ.ವಿನೋದಾ, ಪ್ರಧಾನ ಕಾರ್ಯದರ್ಶಿ ಮಹಾಂತೇಶ್, ಮಾಜಿ ಅಧ್ಯಕ್ಷ ಮಾಧವ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಶಾಂತಿಯುತ ಜಾಥಾ ನಡೆಸಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೆಶಕರಿಗೆ ಮತ್ತು ಜಿಲ್ಲಾಧಿಕಾರಿ ಮೂಲಕ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರಕಾರಕ್ಕೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ, ಈಗ 10 ತಿಂಗಳ ವೇತನವು ಸಹಜ ನ್ಯಾಯದ ವಿರುದ್ಧ ಇರುವುದರಿಂದ 12 ತಿಂಗಳ ವೇತನವನ್ನು ಹಾಗೂ ಯುಜಿಸಿ ನಿಯಮದ ಮಿತಿಯಲ್ಲಿ ತಿಂಗಳ 10ನೇ ತಾರೀಕಿನ ಮೊದಲು ನೀಡಬೇಕು, ಸಿಬ್ಬಂದಿ ಸೇವಾ ನಿಯಮದಂತೆ ಪಿಎಫ್, ಇಎಸ್‌ಐ, ಗ್ರಾಚ್ಯುಟಿ, ಸೌಲಭ್ಯ, ಮಹಿಳಾ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ , ಸಿಬ್ಬಂದಿ ಸೇವಾ ನಿಯಮದಂತೆ ರಜೆಯ ಸೌಲಭ್ಯ, ಸೇವಾ ಅವಧಿಯಲ್ಲಿ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಆರ್ಥಿಕ ನೆರವು ಸೇರಿದಂತೆ ವಿವಿಧ ಸೌಲಭ್ಯವನ್ನು ನೀಡುವಂತೆ ಸರಕಾರವನ್ನು ಆಗ್ರಹಿಸಿದರು.
ಮಂಗಳೂರು ವಿವಿ ವ್ಯಾಪ್ತಿಗೊಳಪಟ್ಟ ಮೂರು ಜಿಲ್ಲೆಗಳಲ್ಲಿರುವ 35 ಪ್ರಥಮ ದರ್ಜೆ ಕಾಲೇಜುಗಳಲ್ಲಿ 600 ಮಂದಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆಗಸ್ಟ 23 ರಿಂದ ಪ್ರಾರಂಭವಾಗಿದ್ದರೂ ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ತಡವಾಗಿ ನಡೆದು ಅಕ್ಟೋಬರ್ 7 ರಿಂದ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಅಂದರೆ ತರಗತಿಗಳು ಪ್ರಾರಂಭವಾಗಿ ಸುಮಾರು 45 ದಿನಗಳ ನಂತರ ಕರ್ತವ್ಯಕ್ಕೆ ಹಾಜರಾಗಿದ್ದರು. ಇದೀಗ ಡಿಸೆಂಬರ್ 15ರ ಒಳಗೆ ಹೆಚ್ಚುವರಿ ಸಮಯ ಕರ್ತವ್ಯ ನಿರ್ವಹಿಸಿ ಈ ಸೆಮಿಸ್ಟರ್ ಒಳಗೆ ಅಗತ್ಯ ಬೋಧನಾ ಕಾರ್ಯವನ್ನು ಮುಗಿಸಬೇಕಾದ ಒತ್ತಡದಲ್ಲಿದ್ದಾರೆ ಎಂದು ಹೇಳಿರುವ ಅತಿಥಿ ಉಪನ್ಯಾಸಕರು ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಬೇಕಾಗಿರುವುದರಿಂದ ರಾಜ್ಯ ಸರಕಾರ ತಕ್ಷಣವೇ ಈ ಬಗ್ಗೆ ಗಮನಹರಿಸಿ ಉಪನ್ಯಾಸಕರ ಹೆಚ್ಚುವರಿ ಕಾರ್ಯಕ್ಕೆ ಹೆಚ್ಚುವರಿ ವೇತನ ಪಾವತಿ ಮಾಡಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸರಕಾರಿ ಕಾಲೇಜುಗಳ ಬೆಳವಣಿಗೆಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟು ಉಪನ್ಯಾಸಕರಲ್ಲಿ ಶೇ.70ರಷ್ಟು ಅತಿಥಿ ಉಪನ್ಯಾಕರಿದ್ದು, ಕಾಲೇಜುಗಳಲ್ಲಿ ಕೇವಲ ಬೋಧನಾ ಕಾರ್ಯ ಮಾತ್ರವಲ್ಲದೆ ಇನ್ನಿತರ ಬೋಧನೇತರ ಕಾರ್ಯ ದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರ ಖಾಯಂ ಮಾಡುವ ಭರವಸೆ ನೀಡಿದ್ದು, ಈಗ ಆ ಭರವಸೆಯನ್ನು ಈಡೇರಿಸಲಿ ಎಂದು ಆಗ್ರಹಿಸಿದ್ದಾರೆ.
ಅತಿಥಿ ಉಪನ್ಯಾಸಕರಿಂದ ಮನವಿಯನ್ನು ಸ್ವೀಕರಿಸಿದ ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ರಾಮೇಗೌಡ ಅವರು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಈಗಾಗಲೇ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದರು.