ಶಾಸಕ ಯತ್ನಾಳ್‌ರನ್ನು ಬಂಧಿಸಲು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹ
Update: 2023-12-07 18:34 IST
ಬಸನಗೌಡ ಪಾಟೀಲ ಯತ್ನಾಲ್
ಮಂಗಳೂರು: ಮುಸ್ಲಿಂ ವಿದ್ವಾಂಸರ ಬಗ್ಗೆ ಸುಳ್ಳು ಆರೋಪ ಹೊರಿಸಿ ಸಮಾಜದಲ್ಲಿ ಅಶಾಂತಿಗೆ ಪ್ರಯತ್ನಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಲ್‌ರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.
ಹುಬ್ಬಳ್ಳಿ ತಾಲೂಕಿನ ಪಾಳೆ ಗ್ರಾಮದಲ್ಲಿ ಮುಖ್ಯಮಂತ್ರಿ ಪಾಳ್ಗೊಂಡಿದ್ದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್ ಬೆಂಬಲಿತ ವ್ಯಕ್ತಿಗಳು ಪಾಲ್ಗೊಂಡಿದ್ದರೆಂಬ ಯತ್ನಾಳರ ಆರೋಪ ಸತ್ಯಕ್ಕೆ ದೂರವಾಗಿದೆ. ಇದು ಕಪೋಕಲ್ಪಿತ ಹೇಳಿಕೆಯಾಗಿದೆ ಎಂದು ಮುಸ್ಲಿಂ ಜಮಾಅತ್ ತಿಳಿಸಿದೆ.
ಯತ್ನಾಳರು ತಮ್ಮ ಆರೋಪವನ್ನು ಕೂಡಲೇ ಸಾಬೀತುಗೊಳಿಸಬೇಕು. ಇಲ್ಲದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದೂ ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.