ಉಳ್ಳಾಲ ತಾಲೂಕಿನ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ
ಮಂಗಳೂರು,ಡಿ.7: ಉಳ್ಳಾಲ ತಾಲೂಕಿನಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಅಸೈಗೊಳಿಯಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪದವಿ ಪೂರ್ವ ಕಾಲೇಜು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲಿಸಿದ ಸಂವಾದ ನಡೆಸಿ ಅಹವಾಲುಗಳನ್ನು ಆಲಿಸಿದರು. ಸ್ಮಾರ್ಟ್ ಕ್ಲಾಸ್ ಕಲಿಕೆಯನ್ನು ಪರಿಶೀಲಿಸಿ ಬಳಿಕ ಅಡುಗೆ ಕೋಣೆ, ಉಗ್ರಾಣ ಕೊಠಡಿಯನ್ನು ತಪಾಸಣೆ ನಡೆಸಿ ಆಹಾರದ ಗುಣಮಟ್ಟ ಪರಿಶೀಲಿಸಿದರು. ರಾತ್ರಿ ವಿದ್ಯಾರ್ಥಿಗಳೊಂದಿಗೆ ವಸತಿ ಶಾಲೆಯಲ್ಲಿ ಭೋಜನ ಸವಿದರು.
ಈ ಸಂದರ್ಭ ಮಂಗಳೂರು ಸಹಾಯಕ ಆಯುಕ್ತ ಹಷರ್ವರ್ಧನ್, ಉಳ್ಳಾಲ ತಹಶೀಲ್ದಾರ್,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಜಿನೇಂದ್ರನಾಥ್ ಮತ್ತಿತರರು ಹಾಜರಿದ್ದರು.
*ಉಳ್ಳಾಲ ನಗರಸಭೆ, ಉಳ್ಳಾಲ ತಾಲೂಕು ಕಚೇರಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿಬ್ಬಂದಿಯೊಂದಿಗೆ ಕಾರ್ಯವೈಖರಿ ಪರಿಶೀಲಿಸಿದರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಕಚೇರಿ ಪ್ರಗತಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.