×
Ad

ನೂರಾರು ಅಶಕ್ತರ ಭವಿಷ್ಯದ ಜೀವನಕ್ಕೆ ಬೆಳಕು ನೀಡುವ 'ಕಾರುಣ್ಯ' ಕಾರ್ಯಕ್ರಮ ಶ್ಲಾಘನೀಯ: ಅರ್ಜುನ್ ಭಂಡಾರ್ಕರ್

Update: 2023-12-09 17:51 IST

ಬಂಟ್ವಾಳ: ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ ಹಾಗೂ ಬೆಂಗಳೂರಿನ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ವತಿಯಿಂದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಜಮೀಯ್ಯತುಲ್ ಫಲಾಹ್ ಎನ್ನಾರ್ಸಿಸಿ ರಿಯಾದ್ ಮತ್ತು ಜಿದ್ದಾ ಘಟಕಗಳ ಸಹಯೋಗದೊಂದಿಗೆ ಕೈ ಕಾಲುಗಳಿಲ್ಲದ ಬಡ ಅಶಕ್ತರಿಗೆ ಉಚಿತ ಕೃತಕ ಕೈ ಕಾಲುಗಳ ಜೋಡಣಾ ಶಿಬಿರದ ಶನಿವಾರ ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಉದ್ಘಾಟನೆಗೊಂಡಿತು.

ಇಬ್ಬರಿಗೆ ವೀಲ್ ಚೆಯರ್ ನೀಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅದ್ಯಕ್ಷ ಅರ್ಜುನ್ ಭಂಡಾರ್ಕರ್ ಮಾತನಾಡಿ, ವಿಕಲಾಂಗರ ಕಲ್ಯಾಣಕ್ಕಾಗಿ, ನೂರಾರು ಅಶಕ್ತರ ಭವಿಷ್ಯದ ಜೀವನಕ್ಕೆ ಬೆಳಕು ನೀಡುವ ಕಾರುಣ್ಯ ಕಾರ್ಯಕ್ರಮ ಈ ಭಾಗದಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡ ಬಂಟ್ವಾಳ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾದ ರಶೀದ್ ವಿಟ್ಲ ಮಾತನಾಡಿ, ಈಗಾಗಲೇ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಪರಿಶೀಲನೆ ಮಾಡಿರುವ ನೂರಕ್ಕೂ ಅಧಿಕ ವಿಕಲಚೇತನ ಫಲಾನುಭವಿಗಳು ಶಿಬಿರದ ನೋಂದಾವಣೆ ಮಾಡಿದ್ದು, ಎರಡು ದಿನಗಳ ಶಿಬಿರದಲ್ಲಿ ಅಳತೆ ತೆಗೆದು ಅದೇ ದಿನ ಜೈಪುರ್ ಬ್ರಾಂಡಿನ ಉತ್ತಮ ಕೃತಕ ಅವಯವಗಳನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದರು.

ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾದ್ಯಕ್ಷ ಕೆ.ಕೆ.ಸಾಹುಲ್ ಹಮೀದ್, ಉಪಾಧ್ಯಕ್ಷ ಫರ್ವೇಝ್ ಅಲಿ, ಪ್ರಧಾನ ಕಾರ್ಯದರ್ಶಿ ಕಾಸಿಂ ಬಾರ್ಕೂರು, ಮಂಗಳೂರು ಘಟಕಾದ್ಯಕ್ಷ ಬಿ.ಎಸ್. ಬಶೀರ್, ಉಳ್ಳಾಲ ಘಟಕಾದ್ಯಕ್ಷ ಅಬ್ದುನ್ನಾಸರ್ ಕೆ.ಕೆ, ಉಡುಪಿ ಘಟಕಾದ್ಯಕ್ಷ ಶಮೀರ್ ಮೊಹಮ್ಮದ್, ಸುಳ್ಯ ಘಟಕದ ಅಧ್ಯಕ್ಷ ಅಬೂಬಕ್ಕರ್, ಬಂಟ್ವಾಳ ಘಟಕದ ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಹಿದಾಯ ಫೌಂಡೇಶನ್ ಅದ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಬೆಂಗಳೂರು ಲಿಂಬ್ ಸೆಂಟರ್ ನ ಚೀಫ್ ಟೆಕ್ನಿಷಿಯನ್ ಮುರಳಿ, ಹಾಸನ ಜನಪ್ರಿಯ ಫೌಂಡೇಶನ್ ಅದ್ಯಕ್ಷ, ಡಾ. ವಿ.ಕೆ.ಅಬ್ದುಲ್ ಬಶೀರ್, ಡಾ. ನುಅಮಾನ್ , ಡಾ. ಅದ್ವೈತ್ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಬಂಟ್ವಾಳ ತಾಲೂಕು ಪಂಚಾಯತ್ ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ಗಿರೀಶ್ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬಿ.ಸಿ. ರೋಡ್ ಸಹರಾ ಪಾಲಿಕ್ಲಿನಿಕ್ ವತಿಯಿಂದ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತು.

ಹಕೀಂ ಕಲಾಯಿ ಸ್ವಾಗತಿಸಿ, ಆಶಿಕ್ ಕುಕ್ಕಾಜೆ ಕಿರಾಅತ್ ಪಠಿಸಿದರು. ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಉಪಾಧ್ಯಕ್ಷ ಶೇಖ್ ರಹ್ಮತುಲ್ಲಾ ವಂದಿಸಿದರು, ಬಿ.ಎಂ.ತುಂಬೆ ಕಾರ್ಯಕ್ರಮ ನಿರೂಪಿಸಿದರು.
















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News