ಕುರುಬ ಸಮಾಜ ಕನಕದಾಸರ ಹೆಸರಲ್ಲಿ ಒಗ್ಗೂಡಬೇಕು: ಪ್ರಭಾವತಿ
ಮಂಗಳೂರು: ಕುರುಬ ಸಮಾಜವು ಕನಕದಾಸರ ಹೆಸರಿನಲ್ಲಿ ಒಗ್ಗಟ್ಟಾಗುವುದು ಪ್ರಶಂಸನೀಯ. ಮತ್ತಷ್ಟು ಒಗ್ಗೂಡಿ ಸಮಾಜಮುಖಿ ಕೆಲಸ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ, ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್‌ನ ರಾಷ್ಟ್ರೀಯ ಅಧ್ಯಕ್ಷೆ ಪ್ರಭಾವತಿ ಕೆ.ಆರ್. ಹೇಳಿದರು.
ಕರಾವಳಿ ಕುರುಬರ ಸಂಘದ ವತಿಯಿಂದ ನಗರದ ಪುರಭವನದಲ್ಲಿ ರವಿವಾರ ನಡೆದ 536ನೇ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುರುಬ ಸಮಾಜ ಕನಕರ ತತ್ವ ಸಿದ್ದಾಂತದಲ್ಲಿ ನಂಬಿಕೆ ಇಟ್ಟುಕೊಂಡು ಆ ಸಿದ್ಧಾಂತದಲ್ಲಿ ಗುರುತಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂತರಾಜು ಆಯೋಗದ ವರದಿ ಅನುಷ್ಠಾನದ ವಿಷಯದಲ್ಲಿ ಆಸಕ್ತಿ ವಹಿಸಿದ್ದಾರೆ. ಅದು ಅನುಷ್ಠಾನಗೊಂಡರೆ ಸಾಮಾಜಿಕ ನ್ಯಾಯ ಸಿಗಲಿದೆ ಎಂದು ಪ್ರಭಾವತಿ ಅಭಿಪ್ರಾಯಪಟ್ಟರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್ ಮಾತನಾಡಿ ಕುರುಬ ಸಮಾಜ ದೂರದ ಊರುಗಳಿಂದ ಮಂಗಳೂರಿಗೆ ಬಂದು ನೆಲೆಸಿ, ಇಲ್ಲಿನ ಜನರ ಜತೆ ಬೆರೆತು ಬಾಳಿದ್ದಾರೆ. ಎಲ್ಲರೊಳಗೊಂದಾಗಿ ಬದುಕಿದ್ದು ಕುರುಬ ಸಮಾಜದ ಹೆಚ್ಚುಗಾರಿಕೆ ಎಂದು ಬಣ್ಣಿಸಿದರು.
ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ್ ಟಿ.ಡಿ ಅವರನ್ನು ಸನ್ಮಾನಿಸಲಾಯಿತು. ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವಾನಂದ ಯರಜೇರಿ ಪ್ರಾಯೋಜಕತ್ವದಲ್ಲಿ ಎಸೆಸ್ಸೆಲ್ಲಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ಸಹಿತ ಗೌರವಿಸಲಾಯಿತು. ಪತ್ರಕರ್ತ ಮೋಹನದಾಸ್ ಮರಕಡ ಅವರ ಶೈಕ್ಷಣಿಕ ದತ್ತು ಯೋಜನೆಯ ನಾಲ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಹ ಪ್ರಾಧ್ಯಾಪಕ ಡಾ.ಮಂಜುನಾಥ್ ಎಂ.ಎಂ. ಕನಕ ಸಂದೇಶ ನೀಡಿದರು. ವಾಣಿಜ್ಯ ತೆರಿಗೆ ಅಧಿಕಾರಿ ಓಂಕಾರಪ್ಪ ಎಸ್.ಜಿ, ಜಿಪಂ ನಿವೃತ್ತ ಯೋಜನಾ ನಿರ್ದೇಶಕ ಟಿ.ಎಸ್.ಲೋಕೇಶ್, ಕ್ಯಾನ್ಸರ್ ತಜ್ಞೆ ಡಾ.ಲೇಪಾಕ್ಷಿ ಮಾತನಾಡಿದರು. ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವಾನಂದ ಯರಜೇರಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಕೆ.ಎನ್ ಬಸವರಾಜಪ್ಪಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಿರಂಜನ್ ಎಲ್. ವಂದಿಸಿದರು. ಡಾ.ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.