×
Ad

ಮಂಗಳೂರು: ವಿಶೇಷ ಚೇತನರ ಜಾನಪದ ನೃತ್ಯೋತ್ಸವ ‘ಟ್ವಿಂಕ್ಲಿಂಗ್ ಸ್ಟಾರ್’ಗೆ ಚಾಲನೆ

Update: 2023-12-13 16:07 IST

ಮಂಗಳೂರು, ಡಿ.13: ಶಕ್ತಿ ನಗರದ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥ್ಥೆ 20 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ಜಾನಪದ ನೃತ್ಯೋತ್ಸವ ಟ್ವಿಕ್ಲಿಂಗ್ ಸ್ಟಾರ್ 2023ಗೆ ಬುಧವಾರ ಚಾಲನೆ ನೀಡಲಾಯಿತು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಡೋಲು ಬಾರಿಸುವ ಮೂಲಕ ಎರಡು ದಿನಗಳ ವಿಶೇಷ ಚೇತನರ ಜಾನಪದ ನೃತ್ಯೋತ್ಸವಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಸಾನ್ನಿಧ್ಯ ಸಂಸ್ಥೆಯಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳು ಊಟ ಮಾಡುವುದು ಹೇಗೆ ಎಂಬುದರಿಂದ ಹಿಡಿದು ಯಕ್ಷಗಾನ, ಕಲೆ, ಕ್ರೀಡಾ ಕ್ಷೇತ್ರದಲ್ಲಿ ತಾವು ಸಾಮಾನ್ಯರಿಗಿಂತ ಯಾವುದೇ ರೀತಿಯಲ್ಲಿ ಕಮ್ಮಿ ಇಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದರು.

ಪಾಲಿಕೆಯಲ್ಲಿಯೂ ಭಿನ್ನ ಚೇತನರು ಹಾಗೂ ಅವರ ಪೋಷಕರಿಗಾಗಿ ಜಾರಿಯಲ್ಲಿರುವ ವಿಶೇಷ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಈ ಭಿನ್ನ ಚೇತರನ್ನು ತರಬೇತು, ವಿದ್ಯಾಭ್ಯಾಸ ನೀಡುವ ಶಿಕ್ಷಕರು ಅಭಿನಂದನಾರ್ಹರು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುರು ಬೆಳದಿಂಗಲು ಸಂಸ್ಥಾಪಕ ಪದ್ಮರಾಜ್ ಆರ್. ಮಾತನಾಡಿ, ಅತ್ಯುತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವ ದೊರಕಿದ್ದು, ಸಾನ್ನಿಧ್ಯ ಸೇರಿದಂತೆ ಭಿನ್ನ ಚೇತನರಿಗಾಗಿ ದುಡಿಯುವ ಸಂಸ್ಥೆಯ ಜತೆ ಕೈಜೋಡಿಸಲು ಸದಾ ಸಿದ್ಧ ಎಂದರು.

ಇನ್ನೋರ್ವ ಅತಿಥಿ ಸಿನೆಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಸಾನ್ನಿಧ್ಯ ಸಂಸ್ಥೆಯನ್ನು ಮುನ್ನಡೆಸುವವರು ಜಾತಿ- ಧರ್ಮ, ಪಕ್ಷ ಭೇದವಿಲ್ಲದೆ ತಮ್ಮನ್ನು ತೊಡಗಿಸಿಕೊಂಡ ಕಾರಣ ಸಂಸ್ಥೆ ಇಂದು ವಿಶ್ವದಲ್ಲಿ ಗುರುತಿಸಿಕೊಳ್ಳಲು ಕಾಲಣವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮನಪಾ ಸದಸ್ಯ ಕಿಶೋರ್ ಕೊಟ್ಟಾರಿ, ಸಂತೋಷ್ ಅರೇಂಜರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಸಿಕ್ವೇರ ಶುಭ ಹಾರೈಸಿದರು.

ರೋಟರಿ ಸಂಸ್ಥೆ ವಲಯ 3ರ ಸಹಾಯಕ ಗವರ್ನರ್ ಆದ ಶಿವಾನಿ ಬಾಳಿಗಾ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮ್ಯಾಂಚೆಸ್ಟರ್ ಗಲ್ಫ್ ಟ್ರೇಡಿಂಗ್ ಯೂರೋ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ಲಾ ಮೋನು, ಮನಪಾ ಸದಸ್ಯೆ ಶಕೀಲಾ ಕಾವ, ಹೋಪ್ ಫೌಂಡೇಶನ್ ನ ಸೈಫ್ ಸುಲ್ತಾನ್, ಸಾನ್ನಿಧ್ಯ ಸಂಸ್ಥೆಯ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ರಾಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಾನ್ನಿಧ್ಯ ಸಂಸ್ಥೆಯ ಅಧ್ಯಕ್ಷ ಮಹಾಬಲ ಮಾರ್ಲ ವಂದಿಸಿದರು. ಸಂಸ್ಥೆಯ ಶಿಕ್ಷಕರಾದ ಸುಮಾ ಡಿಸಿಲ್ವ ಹಾಗೂ ಸುಲತಾ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭಕ್ಕೂ ಮೊದಲು ನೆಹರೂ ಮೈದಾನದಿಂದ ಪುರಭವನಕ್ಕೆ ವಿಶೇಷ ಚೇತನರ ಸಾರ್ವಜನಿಕ ಅರಿವಿನ ಮೆರವಣಿಗೆ ನಡೆಯಿತು.

ಶಿಸ್ತುಬದ್ಧ ಕಾರ್ಯಕ್ರಮ: ನೂರಾರು ಸಂಖ್ಯೆಯಲ್ಲಿ ವಿಶೇಷ ಚೇತನರು ಸೇರಿದ್ದ ಪುರಭವನದಲ್ಲಿ ಅತ್ಯಂತ ವ್ಯವಸ್ಥಿತ ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಸುವಲ್ಲಿ ಸಾನ್ನಿಧ್ಯ ಸಂಸ್ಥೆಯ ಶಿಕ್ಷಕರು ಹಾಗೂ ಪದಾಧಿಕಾರಿಗಳು ಸಹಕರಿಸಿದರು.

ಸುಸಜ್ಜಿತ ಆಟಿಸಂ ಸೆಂಟರ್

ಆಟಿಸಂ ಮಕ್ಕಳಿಗಾಗಿ ವಿಶೇಷ ಕೇಂದ್ರವನ್ನು ತೆರೆಯುವ ನಿಟ್ಟಿನಲ್ಲಿ ಪ್ರತಿನಿತ್ಯ ಪೋಷಕರಿಂದ ಹಲವಾರು ಕರೆಗಳು ಬರುತ್ತಿದ್ದು, ಸಾನ್ನಿಧ್ಯ ಸಂಸ್ಥೆಯು ಸುಸಜ್ಜಿತ ಆಟಿಸಂ ಕೇಂದ್ರವನ್ನು ಶೀಘ್ರದಲ್ಲೇ ತೆರೆಯುವ ಬಯಕೆಯನ್ನು ಹೊಂದಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ತಿಳಿಸಿದರು.

ಸಾನ್ನಿಧ್ಯ ಮಕ್ಕಳ ಹುಲಿವೇಷ ಕುಣಿತ

ಉದ್ಘಾಟನಾ ಸಮಾರಂಭದ ವೇಳೆ ಸಾನ್ನಿಧ್ಯ ಸಂಸ್ಥೆಯ ಮಕ್ಕಳು ವೇದಿಕೆಯ ಎದುರು ಹುಲಿವೇಷ ಭೂಷಣದೊಂದಿಗೆ ಕುಣಿತ ಪ್ರದರ್ಶಿಸಿ ಮನರಂಜಿಸಿದರು. ಇದೇ ವೇಳೆ ರಾಜ್ಯಮಟ್ಟದ ಸ್ಪರ್ಧೆಯ ಟ್ರೋಫಿಗಳ ಅನಾವರಣ ನಡೆಯಿತು. ಎರಡು ದಿನಗಳ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬೀದರ್, ಶಿವಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ 37 ಸಂಸ್ಥೆಗಳಿಂದ 500ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News