ಮಂಗಳೂರು ಕ್ಷೇತ್ರಕ್ಕೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ: ಸ್ಪೀಕರ್ ಯು.ಟಿ ಖಾದರ್
ಕೊಣಾಜೆ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ತಪ್ಪಿಸಲು ಟ್ಯಾಂಕರ್ ಮಾನಿಟರಿಂಗ್ ಆಪ್ ನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ತಾಂತ್ರಿಕ ತೊಂದರೆಗಳಾಗದಂತೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ, ಪಿಡಿಓಗಳಿಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು.
ದೇರಳಕಟ್ಟೆಯ ದ ಕಂಫರ್ಟ್ ಇನ್ ಸಭಾಂಗಣದಲ್ಲಿ ಮಂಗಳವಾರ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧಿಕಾರಿಗಳು , ಅಧ್ಯಕ್ಷರು, ಉಪಾಧ್ಯಕ್ಷರು , ಉಳ್ಳಾಲ ತಾಲೂಕು ತಹಶೀಲ್ದಾರ್ ಸಮ್ಮುಖದಲ್ಲಿ ಹಮ್ಮಿಕೊಂಡ ಕುಡಿಯುವ ನೀರು ಕುರಿತ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಮಂಗಳೂರು ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗ ದಂತೆ ಅಧಿಕಾರಿಗಳು, ಪಿಡಿಓ, ಸೆಕ್ರೆಟರಿಗಳು ಪಂಚಾಯಿತಿ ಅಧ್ಯಕ್ಷರು , ಗ್ರಾಮದ ಹಿರಿಯರನ್ನು ಕ್ರೂಢೀಕರಿಸಿಕೊಂಡು ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಕಳೆದ ವರ್ಷ ಯಾವ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಅನ್ನುವ ಕುರಿತು ವರದಿಯನ್ನು ಅಧಿಕಾರಿಗಳಿಂದ ಪಡೆಯಲಾಗಿದೆ. ಆ ಭಾಗಗಳಲ್ಲಿ ಪ್ರಸಕ್ತ ವರ್ಷ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಹಾಗೂ ಅಧಿಕಾರಿಗಳು ಪೂರ್ವಭಾವಿಯಾಗಿ ತಯಾರಿರಬೇಕು ಅನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮೊದಲ ಪ್ರಯತ್ನವಾಗಿ ಕುಡಿಯುವ ನೀರಿನ ಟ್ಯಾಂಕರುಗಳಿಗೆ ಮಾನಿಟರಿಂಗ್ ಆಪ್ ಯೋಜನೆಯನ್ನು ರೂಪಿಸಲಾಗಿದೆ. ಅದರ ಸಾಧಕ ಬಾಧಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿ ವರ್ಗದವರಿಗೆ ಅರಿಯಲು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲು ಸೂಚಿಸಲಾಗಿದೆ. ಕ್ಷೇತ್ರದಲ್ಲಿ ಸಮಗ್ರವಾಗಿ ಜಾರಿಯಾದಲ್ಲಿ ರಾಜ್ಯದಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ರಾಜ್ಯದಾದ್ಯಂತ ನೀರಿನ ಅಭಾವ ತಪ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ 200 ಕೋಟಿ ರೂ. ಅನುದಾನ ಬಿಡುಗಡೆಯಾಗುವ ಕೊನೆಯ ಹಂತದಲ್ಲಿದೆ. ಉಳ್ಳಾಲ ನಗರ ವ್ಯಾಪ್ತಿಯ ಕೆಲಸ ಪೂರ್ಣಗೊಂಡರೂ, ಗ್ರಾಮೀಣ ಮಟ್ಟಕ್ಕೆ ಎರಡು ವರ್ಷಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. ಟೆಂಡರ್ ಪ್ರಕ್ರಿಯೆ ನಡೆದು ಎರಡು ವರ್ಷ ಬೇಕಾಗುತ್ತದೆ. ಆನಂತರ ನೀರಿನ ವ್ಯವಸ್ಥೆ ಆಗಲಿದೆ. ಗ್ರಾ.ಪಂ.ನವರು ವರ್ಷಕ್ಕೆ 12 ಲಕ್ಷ ನೀರಿಗಾಗಿ ಗ್ರಾ.ಪಂ.ನಿಂದ ಕೊಡುವ ಬದಲು ಟ್ಯಾಂಕರ್ ಖರೀದಿಗೆ ಕೇಳಿಕೊಂಡಿದ್ದಾರೆ. ಆದರೆ ಸರಕಾರದಿಂದ ಟ್ಯಾಂಕರ್ ಬಾಡಿಗೆ ಪಡೆಯಲು ಮಾತ್ರ ಅವಕಾಶವಿದೆ. ಕರಾರುಪತ್ರದಂತೆ ಟ್ಯಾಂಕರ್ ಅನ್ನು ಸದ್ಯಕ್ಕೆ ನೀಡಬಹುದು. ಮುಂದೆಯೂ ಸಮಸ್ಯೆ ಮುಂದುವರಿದಲ್ಲಿ ರಾಜ್ಯದ ಸಚಿವರುಗಳ ಚರ್ಚಿಸಲಾಗುವುದು ಎಂದರು.
ಜಲಯೋಜನೆ, ಕಂದಾಯ , ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ಕುಡಿಯುವ ನೀರಿನ ಯೋಜನೆಯಲ್ಲಿ ಕಾರ್ಯಾಚರಿಸಲಿದೆ. ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ತಹಶೀಲ್ದಾರ್ ಪುಟ್ಟರಾಜು ಡಿ., ಉಪತಹಶೀಲ್ದಾರ್ ನವನೀತ್ ಮಾಳವ, ಕಂದಾಯ ನಿರೀಕ್ಷಕ ಪ್ರಮೋದ್ ಕುಮಾರ್, ಕೃಷಿ ಇಲಾಖೆ ಅಧಿಕಾರಿ ವೀಣಾ ರೈ, ಮಂಗಳೂರು ಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ ಅಧ್ಯಕ್ಷರು ಭಾಗವಹಿಸಿದ್ದರು.