×
Ad

ಬೀದಿ ಬದಿ ವ್ಯಾಪಾರಿಗಳಿಂದ ಸೌಹಾರ್ದ ಕ್ರಿಸ್ಮಸ್ ಆಚರಣೆ

Update: 2023-12-21 20:33 IST

ಮಂಗಳೂರು : ಯೇಸು ಕ್ರಿಸ್ತರ ಪ್ರೀತಿ ಮತ್ತು ಕಾರುಣ್ಯದ ಸಂದೇಶ ಸಮಾಜಕ್ಕೆ ದಾರಿದೀಪವಾಗಿದೆ. ಹಬ್ಬಗಳನ್ನು ಎಲ್ಲಾ ಜನರು ಸೇರಿಕೊಂಡು ಆಚರಿಸಿದಾಗ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕಾಪಾಡಲು ಸಾಧ್ಯವಾಗಲಿದೆ ಎಂದು ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಮತ್ತು ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ)ದ ಸಹಾಭಾಗಿತ್ವದಲ್ಲಿ ಗುರುವಾರ ಬೀದಿ ವ್ಯಾಪಾರಿಗಳ ಕಚೇರಿಯಲ್ಲಿ ನಡೆದ ಸೌಹಾರ್ದ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪದುವಾ ಪ್ರೌಢ ಶಾಲೆಯ ಶಿಕ್ಷಕ ಸ್ಟ್ಯಾನಿ ತಾವ್ರೊ ಮಾತನಾಡುತ್ತಾ ‘ನಿನ್ನ ಶತ್ರುಗಳನ್ನು ಪ್ರೀತಿಸು, ನಿನ್ನನ್ನು ದ್ವೇಷಿಸುವವರಿಗೆ ಒಳಿತನ್ನು ಬಯಸಬೇಕೆಂದು ಮಾನವ ಜನಾಂಗಕ್ಕೆ ಸಾರಿದ ಯೇಸು ಕ್ರಿಸ್ತರು ಸಕಲ ಮಾನವರಿಗೆ ಭ್ರಾತೃತ್ವದ ಸಂದೇಶ ನೀಡಿದ ಮಹಾನ್ ಶಕ್ತಿಯಾಗಿದ್ದಾರೆ. ಬೀದಿ ವ್ಯಾಪಾರಿಗಳು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುವ ಮೂಲಕ ಮಂಗಳೂರಿನ ನಿಜವಾದ ಸೌಹಾರ್ದದ ರಾಯಭಾರಿಗಳಾಗಿದ್ದಾರೆ. ಬೀದಿ ವ್ಯಾಪಾರಿಗಳಲ್ಲಿರುವ ಸಾಮರಸ್ಯದ ಸದ್ಭಾವನೆ ಸರ್ವರಿಗೂ ಅನುಕರಣೀಯ ಎಂದರು.

ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ನವೀನ್ ಕೊಂಚಾಡಿ, ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಶುಭ ಕೋರಿದರು. ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖಂಡರಾದ ಹರೀಶ್ ಪೂಜಾರಿ, ಆಸೀಫ್ ಬಾವ ಉರುಮನೆ, ಮೇಬಲ್ ಡಿಸೋಜ, ಮೇರಿ ಡಿಸೋಜ, ಫಿಲೋಮೀನಾ, ಪ್ರವೀಣ್ ಕದ್ರಿ, ನೌಷಾದ್ ಉಳ್ಳಾಲ, ಇಸ್ಮಾಯಿಲ್, ಆದಂ ಬಜಾಲ್, ಶ್ರೀಧರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News