ಕುಂಬ್ರ ಕೆಐಸಿ ನವೀಕೃತ ಲೈಬ್ರರಿ ಉದ್ಘಾಟನೆ: ಸಿವಿಲ್ ಸರ್ವಿಸ್ ತರಗತಿ ಆರಂಭ
ಪುತ್ತೂರು: ಸಮಾಜ ಪ್ರಗತಿ ಪಥದಲ್ಲಿ ಸಾಗುವಂತಾಗಲು ಶಿಕ್ಷಣ ಮುಖ್ಯವಾಗಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಶಿಕ್ಷಣವು ಅರ್ಧದಲ್ಲಿ ಮೊಟಕುಗೊಳ್ಳದಂತೆ ನೋಡಿಕೊಳ್ಳಬೇಕು. ಸಮನ್ವಯ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ಪ್ರೇಮಿಗಳು ನೀಡುವ ಸಹಾಯ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಹೇಳಿದರು.
ಅವರು ಕುಂಬ್ರದ ಕೆಐಸಿಯಲ್ಲಿ ನಡೆಯುತ್ತಿರುವ 4ನೇ ವರ್ಷದ ಸನದುದಾನ ಮಹಾ ಸಮ್ಮೇಳನದ ಅಂಗವಾಗಿ ಗುರುವಾರ ನವೀಕೃತ ಲೈಬ್ರರಿ ಹಾಗೂ ಸಿವಿಲ್ ಸರ್ವಿಸ್ ತರಗತಿ ಉದ್ಘಾಟನಾ ಸಮಾರಂಭದಲ್ಲಿ ನವೀಕೃತ ಲೈಬ್ರರಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಎಂಡಿಆರ್‍ಎಂ ಗ್ರೂಪ್‍ನ ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ ಮಾತನಾಡಿ ಸಂಸ್ಥೆಯಿಂದ ಪದವಿ ಪಡೆದಿರುವ ವಿದ್ವಾಂಸರು ಸಂಸ್ಥೆಗೆ ಕೀರ್ತಿ ತರುವಂತೆ ಧಾರ್ಮಿಕ, ಸಾಮಾಜಿಮ ಮತ್ತು ಶೈಕ್ಷಣಿಕ ಸೇವಾ ಕಾರ್ಯ ನಡೆಸಬೇಕು ಎಂದರು.
ಸಿವಿಲ್ ಸರ್ವಿಸ್ ತರಗತಿಯನ್ನು ಉದ್ಘಾಟಿಸಿದ ಮಂಗಳೂರು ಭಾರತ್ ಕನ್ಸ್ಟ್ರಕ್ಷನ್ಸ್‍ನ ಮುಹಮ್ಮದ್ ಮುಸ್ತಫಾ ಅವರು ಮಾತನಾಡಿ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಕನಸು ಹೊಂದಿ ಅದನ್ನು ನನಸುಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸಬೇಕು ಎಂದರು.
ಯೂಸುಫ್ ಹಾಜಿ ಮೇನಾನ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಪ್ರಸಾರ ಭಾರತಿ ಅಧಿಕಾರಿ ಶಾಹಿದ್ ತಿರುವಳ್ಳೂರು ಮುಖ್ಯ ಪ್ರಭಾಷಣ ನೀಡಿದರು.
ಕುಂಬ್ರ ಕೆಐಸಿಯ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಆಕರ್ಷಣ್, ನ್ಯಾಯವಾದಿ ಫಝಲ್ ರಹೀಂ, ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲ್, ಕೆಐಸಿ ಪ್ರಾಧ್ಯಾಪಕ ಅನೀಸ್ ಕೌಸರಿ, ವ್ಯವಸ್ಥಾಪಕ ಸತ್ತಾರ್ ಕೌಸರಿ, ಗಲ್ಫ್ ಸಮಿತಿಯ ಸಂಯೋಜಕ ನೂರ್ ಮುಹಮ್ಮದ್ ನೀರ್ಕಜೆ, ದುಬೈ ಉದ್ಯಮಿ ತಾಹಿರ್ ಸಾಲ್ಮರ, ಮುಹಮ್ಮದ್ ಹಾಜಿ ಮುಂಡೋಳೆ, ಉದ್ಯಮಿ ಹನೀಫ್, ಕೋಡಿಂಬಾಡಿ ಮಸೀದಿ ಅಧ್ಯಕ್ಷ ಉಮ್ಮರ್ ಹಾಜಿ, ಅಲಿ ದುಬೈ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಹಾಜಿ ಅಬ್ದುಲ್ ರಹಿಮಾನ್ ಅಝಾದ್, ಕೆಎಂ. ಬಾವ ಹಾಜಿ ಕೂರ್ನಡ್ಕ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಚೆಯರ್‍ಮೆನ್ ಅಶ್ರಫ್ ಶಾ ಮಾಂತೂರು ಸ್ವಾಗತಿಸಿದರು. ಕೆ.ಎಂ.ಎ ಕೊಡುಂಗಾಯಿ ನಿರೂಪಿಸಿದರು.