×
Ad

ಎಸ್‌ಡಿಎಂಸಿ ಸಮನ್ವಯ ಸಮಿತಿ ನಿಯೋಗದಿಂದ ಶಿಕ್ಷಣ ಸಚಿವರಿಗೆ ದೂರು

Update: 2023-12-24 19:02 IST

ಮಂಗಳೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು ಆಗಾಗ ನಡೆಯುವ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಡಳಿತ ನಿರ್ವಹಣೆ ಮಾಡುವುದು ಯಾವಾಗ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದು ಯಾವಾಗ ಎಂದು ರಾಜ್ಯ ಎಸ್‌ಡಿಎಂಸಿ ಸಮನ್ವಯ ಸಮಿತಿ ಪ್ರಶ್ನಿಸಿದೆ. ಅಲ್ಲದೆ ಸಮಿತಿಯ ಮುಖಂಡ ಮೊಯ್ದಿನ್ ಕುಟ್ಟಿ ನೇತೃತ್ವದ ನಿಯೋಗವು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಶೈಕ್ಷಣಿಕ ವರ್ಷದ ಜೂನ್‌ನಿಂದ ಡಿಸೆಂಬರ್‌ವರೆಗೆ ಸರಕಾರಿ ಶಾಲೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಶಾಲಾ ಶಿಕ್ಷಕರ ಬದಲು ಬೇರೆ ಶಾಲೆಗಳ ಶಿಕ್ಷಕರ ಸಂಘದ ಪದಾಧಿಕಾರಿಗಳು ಅತಿಥಿಗಳಾಗಿ ಭಾಗವಹಿಸಿದ್ದಾರೆ. ಸರಕಾರದ ಆದೇಶವನ್ನು ಉಲ್ಲಂಘಿಸಿ ಸನ್ಮಾನವನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ 900ರಷ್ಟು ಸರಕಾರಿ ಪ್ರಾಥಮಿಕ ಹಿರಿಯ ಹಾಗೂ ಕಿರಿಯ ಶಾಲೆಗಳಲ್ಲಿ ಬಹುತೇಕ ಶಿಕ್ಷಕರು ಶಿಕ್ಷಕರ ಹೆಸರಲ್ಲಿರುವ ಹಲವು ಹೆಸರಿನ ಸಂಘಗಳಲ್ಲಿ ಪದಾಧಿಕಾರಿಗಳಾಗಿದ್ದಾರೆ. ಬಹುತೇಕ ಈ ಶಿಕ್ಷಕರು ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಶಾಲೆಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸಹಜವಾಗಿದೆ. ಕೆಲವು ಶಾಲೆಗಳಲ್ಲಿ ಸಂಘದ ಪದಾಧಿಕಾರಿಗಳು ಗೌರವ ಶಿಕ್ಷಕರನ್ನು ನೇಮಿಸಿ, ಇವರು ಸಹಿ ಹಾಕಲು ಮಾತ್ರ ಶಾಲೆಗೆ ಬರುತ್ತಿದ್ದು, ಈ ಬಗ್ಗೆಯೂ ಕ್ರಮ ಜರುಗಿಸಬೇಕು ಎಂದು ನಿಯೋಗ ಆಗ್ರಹಿಸಿದೆ.

ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕೂಡ ಪ್ರಯೋಜನವಾಗಿಲ್ಲ. ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಧ್ಯೆ ಈ ವಿಷಯದಲ್ಲಿ ಒಳ ಒಪ್ಪಂದ ನಡೆದಿದೆ ಎಂದು ಆಪಾದಿಸಿರುವ ಸಮಿತಿಯು ಸರಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಕರಿದ್ದೂ ಕೂಡ ಬೆರಳೆಣಿಕೆಯ ಶಿಕ್ಷಕರ ಸಂಘದ ಸದಸ್ಯರಿಂದ ಶಾಲೆಗಳಲ್ಲಿ ಮಕ್ಕಳಿಗೆ ಕೊಡುವಂತಹ ಶಿಕ್ಷಣ ಸರಿಯಾಗಿ ತಲುಪಿಸಲು ಆಗುತ್ತಿಲ್ಲ. ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಚಿವರಿಗೆ ಮನವಿ ಮಾಡಲಾಯಿತು.

ವಾರಕ್ಕೊಮ್ಮೆ ನಡೆಯುವ ಸಮಾಲೋಚನಾ ಸಭೆಗಳು ಸಂಘದ ವೇದಿಕೆಯಾಗಿ ಮಾರ್ಪಟ್ಟಿದೆ. ಈ ಸಭೆಗಳಿಂದ ಮಕ್ಕಳಿಗೆ ಯಾವುದೇ ರೀತಿಯ ಪ್ರಯೋಜನಗಳು ಆಗುತ್ತಿಲ್ಲ. ಅದಲ್ಲದೆ ಶಿಕ್ಷಕರ ಕೊರತೆಗಳಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ಕುಂಠಿತವಾಗುತ್ತಿದೆ. ಶಾಲೆಗಳಲ್ಲಿ ಹಾಗೂ ಇಲಾಖಾ ಕಚೇರಿಗಳಲ್ಲಿ ಕಡ್ಡಾಯವಾಗಿ ಚಲನವಲನ ದಾಖಲು ಮಾಡಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಎಸ್‌ಡಿಎಂಸಿ ಸಮನ್ವಯ ಸಮಿತಿಯ ಮುಖಂಡರಾದ ರಮೇಶ್ ಶೆಟ್ಟಿ ಬೆಳ್ತಂಗಡಿ, ಸಾಜಸ್ ಕೈಕಂಬ, ಇಸ್ಮಾಯಿಲ್ ಮಾಣಿ, ಮುಹಮ್ಮದ್ ಜಿಎಂ ಬನ್ನಂಗಳ, ಸಿರಾಜ್ ಕುವೆಟ್ಟು ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News