×
Ad

ಉಪ್ಪಿನಂಗಡಿ: ಮಹಿಳೆಯ ಮೇಲೆ ಹಲ್ಲೆ ಆರೋಪ; ಪ್ರಕರಣ ದಾಖಲು

Update: 2023-12-25 20:45 IST

ಉಪ್ಪಿನಂಗಡಿ: ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದದಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಗಂಗಾಧರ ಎಂಬಾತನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮೋಹಿನಿ ನೆಕ್ಕರಾಜೆ ಅವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ತನ್ನ ಜಮೀನಿನಲ್ಲಿ ಸುಮಾರು 10 ದಿನಗಳಿಂದ ಹಿಟಾಚಿ ಯಂತ್ರದಲ್ಲಿ ಕೆಲಸ ನಡೆಯುತ್ತಿದ್ದು, ಡಿ.8ರಂದು ರಾತ್ರಿ 8ಗಂಟೆಗೆ ಹಿಟಾಚಿ ಅಪರೇಟರ್ ಬರಮಪ್ಪ ಎಂಬವರು ಕೆಲಸ ಮುಗಿಸಿ ಹಿಟಾಚಿಯಿಂದ ಹೊರ ಬಂದಾಗ ನೆರೆಮನೆಯ ಗಂಗಾಧರ ಬರಮಪ್ಪರವರನ್ನು ತಡೆದು ನಿಲ್ಲಿಸಿ, ನೀನು ಯಾಕೆ ನಮ್ಮ ಮಣ್ಣಿನ ಧರೆಯ ಮಣ್ಣು ತೆಗೆದದ್ದು ಯಾಕೆ ಎಂದು ಪ್ರಶ್ನಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆತನಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ತಾನು ಅಲ್ಲಿಗೆ ಹೋದಾಗ ನನಗೂ ಕಲ್ಲಿನಿಂದ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ನನ್ನನ್ನು ದೂಡಿದ ಪರಿಣಾಮ ನಾನು ಅಲ್ಲಿಯೇ ಇದ್ದ ಹಿಟಾಚಿ ಯಂತ್ರದ ಮೇಲೆ ಬಿದ್ದಿದ್ದೇನೆ. ಬಳಿಕ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಅಲ್ಲದೇ, ತನ್ನ ಗಂಡ ಲೋಕೇಶ ಎಂಬವರ ಮೇಲೆಯೂ ಕೈಯಿಂದ ಹಲ್ಲೆ ನಡೆಸಿದ್ದಾನೆ. ಅಷ್ಟರಲ್ಲಿ ನನ್ನ ಮಗ ಭರತ ಕೆಲಸಕ್ಕೆ ಹೋದವ ಬಂದಾಗ ನೀವಿನ್ನು ನನ್ನ ಮಣ್ಣಿನ ಧರೆಯ ಬಳಿ ಕೆಲಸ ಮಾಡಿದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರು ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಯ ವಿರುದ್ಧ  ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News