ಸುರತ್ಕಲ್: ಮೀಫ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
ಸುರತ್ಕಲ್: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ʼಪರೀಕ್ಷಾ ಪೂರ್ವ ಸಿದ್ಧತೆ ಶಿಬಿರʼ ವಿಷಯವಾರು ತರಬೇತಿ ಕಾರ್ಯಾಗಾರ ನಡೆಯಿತು.
6ನೇ ಕಾರ್ಯಾಗಾರವು ಮಿಸ್ಬಾ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ , ಜಮಿಯ್ಯತುಲ್ ಫಲಾಹ್ ಮೂಡುಬಿದಿರೆ ಮತ್ತು ಜೇಸೀಸ್ ಮೂಡುಬಿದಿರೆ ಸಹಯೋಗದಲ್ಲಿ ಕಾಟಿಪಳ್ಳ ಮಿಸ್ಬಾ ವಿಮೆನ್ಸ್ ಕಾಲೇಜ್ ಸಭಾಂಗಣ ದಲ್ಲಿ ಜರಗಿತು.
ಮೀಫ್ ಅಧ್ಯಕ್ಷರಾದ ಮೂಸಬ್ಬ ಪಿ ಬ್ಯಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಜಾವಾಣಿ ಪತ್ರಿಕೆಯ ಅಸೋಸಿಯೇಟೆಡ್ ಸಂಪಾದಕ ಬಿ.ಎಂ. ಹನೀಫ್ ಅವರು ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪ್ರೇರಣಾ ಭಾಷಣ ಮಾಡಿದರು.
ಬಿ. ಎಂ ಹನೀಫ್ ರವರು ಪತ್ರಿಕಾ ರಂಗದಲ್ಲಿ ನೀಡಿದ ವಿಶೇಷ ಕೊಡುಗೆಯನ್ನು ಪ್ರಶಂಸಿಸಿ ಮೀಫ್ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಮಿಸ್ಬಾ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಇದರ ಅಧ್ಯಕ್ಷರಾದ ಮುಮ್ತಾಝ್ ಅಲಿ ಸ್ವಾಗತಿಸಿ, ಜಮಿಯ್ಯತುಲ್ ಫಲಾಹ್ ಮೂಡುಬಿದಿರೆಯ ಸಲೀಂ ಹಂಡೆಲ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಕನ್ವೀನರ್ ಬಿ. ಎ. ಇಕ್ಬಾಲ್ ವಂದಿಸಿದರು.
ಪ್ರಾರಂಭದಲ್ಲಿ ಅಂಜುಮನ್ ವಿದ್ಯಾಸಂಸ್ಥೆ ಜೋಕಟ್ಟೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಮೀಫ್ ಕಾರ್ಯದರ್ಶಿ ಅನ್ವರ್ ಹುಸೇನ್ ಗೂಡಿನಬಳಿ, ಮಿಸ್ಬಾ ವಿಮೆನ್ ಕಾಲೇಜ್ ಸಂಚಾಲಕರಾದ ಬಿ.ಎ.ನಝೀರ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜೇಸೀಸ್ ಮೂಡುಬಿದಿರೆಯ ಜೇಸೀ. ವಿನೋದ್ ಕುಮಾರ್ ಮತ್ತು ಸೈಯದ್ ಶರೀಫ್ ಭಾಗವಹಿಸಿ, ಇಡೀ ದಿನದ ಕಾರ್ಯಾಗಾರ ನಡೆಸಿಕೊಟ್ಟರು. ಸುರತ್ಕಲ್, ಸೂರಿಂಜೆ, ಚೊಕ್ಕಬೆಟ್ಟು, ಕಾಟಿಪಳ್ಳ, ಕೃಷ್ಣಾಪುರ, ಜೋಕಟ್ಟೆಯ 7 ವಿದ್ಯಾಸಂಸ್ಥೆಗಳ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾರ್ಯಕ್ರಮದ ಪ್ರಯೋಜಕತ್ವವನ್ನು ಮಿಸ್ಬಾ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ವಹಿಸಿತ್ತು.