×
Ad

ವಿದ್ಯಾಮಂದಿರ‌ ನಿರ್ಮಾಣ ಇಂದಿನ ಅಗತ್ಯತೆ: ಬಿ.ಕೆ. ಹರಿಪ್ರಸಾದ್

Update: 2024-01-05 19:48 IST

ಕೊಣಾಜೆ: ಆ ಕಾಲದಲ್ಲಿ ಶಿಕ್ಷಣಕ್ಕಾಗಿ ದಾನಧರ್ಮ ಮಾಡುವವರು ಹೆಚ್ಚಿದ್ದರು. ಆದರೆ ಶಿಕ್ಷಣ ವ್ಯಾಪಾರ ಕೇಂದ್ರಗಳಾಗಿ ರೂಪುಗೊಳ್ಳುತ್ತಿರುವುದು ವಿಷಾದನೀಯ. ಇಂದಿನ ಕಾಲದಲ್ಲಿ ದೇವಸ್ಥಾನ, ಮಸೀದಿ,‌ ಮಂದಿರಗಳಿಗಿಂತ ಶಾಲೆ ನಿರ್ಮಾಣ ಬಹಳ ಅಗತ್ಯ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಹೇಳಿದರು.

ಅವರು ಶುಕ್ರವಾರ ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೇರಳದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಶೇ.100 ಸಾಕ್ಷರತೆ ಸಾಧನೆ ಸಾಧ್ಯವಾಯಿತು. ಮಾತ್ರವಲ್ಲ ವಿವಿಧ ರಾಜ್ಯಗಳಲ್ಲಿ ಮಹಾತ್ಮರು ಶಿಕ್ಷಣವನ್ನು ಎಲ್ಲರಿಗೂ ತಲುಪಿಸಲು‌ ಶ್ರಮಿಸಿದರು. ಪ್ರಮುಖವಾಗಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ದೊರೆಯಿತು.

ವಿಶ್ವದಲ್ಲೇ ಭಾರತದಷ್ಟು ಸುಂದರ, ಸೌಹಾರ್ದ ದೇಶ ಕಾಣಲು ಅಸಾಧ್ಯ. ನಮ್ಮಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ರಾಜರ ಹಾಗಿರದೆ ಜನಸೇವಕರಾಗಿರಬೇಕು. ಜೀವನಕ್ಕೋಸ್ಕರ ಬರಬೇಡಿ‌. ಜೀವನ ಬದಲಾಯಿಸಲುವರಾಜಕೀಯಕ್ಕೆ ಬನ್ನಿ ಎಂದು ಅಂಬೇಡ್ಕರ್ ಹೇಳಿದ್ದು ಸದಾ ಪ್ರಸ್ತುತ ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರು ಮಾತನಾಡಿ, ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಪೋಷಕ ರೊಂದಿಗೆ ಶಿಕ್ಷಕರ ಪಾತ್ರ ಮಹತ್ತರವಾದುದು. ವಿಶ್ವಮಂಗಳ ವಿದ್ಯಾಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಉತ್ತಮ ಸಾಧನೆಯೊಂದಿಗೆ ಮುನ್ನಡೆಯುತ್ತಿದೆ ಎಂದರು.

ವಿಶ್ವಮಂಗಳ ಎಜುಕೇಶನ್ ಸೊಸೈಟಿ ಅಧ್ಯಕ್ಷ ಪ್ರೊ.ವಿಶ್ವನಾಥ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿವಿಧ ವಿಭಾಗಗಳ ಮುಖ್ಯೋಪಾಧ್ಯಾಯರಾದ ಹಂಸಗೀತಾ, ಶೋಭಾವತಿ, ಪ್ರಿಯಾ ಹಾಗೂ ಪ್ರಾಂಶುಪಾಲೆ ಪೂರ್ಣಿಮಾ ಶೆಟ್ಟಿ ವರದಿ ವಾಚಿಸಿದರು.

ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ವಿಶ್ವಮಂಗಳ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ವಿನಯ ರಜತ್ ಸ್ವಾಗತಿದರು. ಮಂಥನ್ ಪ್ರಸಾದ್ ರೈ ಹಾಗೂ ಶರ್ಮಿನ್ ಖದೀಜಾ ಬಿ.ಎಂ. ಕಾರ್ಯಕ್ರಮ ನಿರೂಪಿಸಿದರು.

ನೂತನ ಕೊಠಡಿ ಉದ್ಘಾಟನೆ: ಬಿ.ಕೆ.ಹರಿಪ್ರಸಾದ್ ಅವರು ರಾಜ್ಯ ಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ವಿಶ್ವಮಂಗಳ ವಿದ್ಯಾಸಂಸ್ಥೆಗೆ ನೀಡಿದ 11 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ನೂತ‌ನ ಕೊಠಡಿಯ ಉದ್ಘಾಟನೆ ಶಾಲಾ‌ ವಾರ್ಷಿಕೋತ್ಸವದ ಸಂದರ್ಭ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News