ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಸ್ಲಿಮ್ ಲೀಗ್ ಆಗ್ರಹ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕೋಮು ದ್ವೇಷ ಭಾಷಣ ಮಾಡಿ ಸೌಹಾರ್ದತೆಗೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲಾ ಸಮಿತಿಯು ಪಶ್ಚಿಮ ವಲಯ ಡಿಐಜಿ ಅವರನ್ನು ಆಗ್ರಹಿಸಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಸಿ.ಅಬ್ದುಲ್ ರಹಿಮಾನ್ ನೇತೃತ್ವದ ನಿಯೋಗವು ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಕೋಮು ದ್ವೇಷ ಭಾಷಣದಿಂದ ಸೌಹಾರ್ದತೆಗೆ ಧಕ್ಕೆಯಾಗುತ್ತಿದ್ದು, ಈ ರೀತಿ ಭಾಷಣ ಮಾಡುವವರ ವಿರುದ್ಧ ಸ್ವಯಂ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಅದರಂತೆ ದ್ವೇಷ ಭಾಷಣ ಮಾಡುವವರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಸುಪ್ರೀಂ ಕೋರ್ಟು ಆದೇಶವನ್ನು ಪಾಲಿಸುವಂತೆ ಪೊಲೀಸ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಆರ್‌ಎಸ್‌ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಮ್ ಮಹಿಳೆಯರ ವಿರುದ್ಧ ಅಪಮಾನಕಾರಿ ಭಾಷಣ ಮಾಡಿದ್ದು, ಇವರ ಹೇಳಿಕೆಯ ವಿರುದ್ಧ ಪ್ರತಿಭಟನೆಗೆ ಇಳಿದ ಮುಸ್ಲಿಮ್ ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನಾ ಸಮಾರಂಭ ಏರ್ಪಡಿಸಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಲ್ಲ ಮಸೀದಿ, ಮಂದಿರ, ಚರ್ಚ್ ದರ್ಗಾಗಳಿಗೆ ಪೂರ್ಣ ರಕ್ಷಣೆಯನ್ನು ಒದಗಿಸುವಂತೆ ಮತ್ತು ಎಲ್ಲ ಮದ್ಯ ಮಾರಾಟದ ಅಂಗಡಿಯನ್ನು ಮುಚ್ಚಲು ಆದೇಶಿಸಿ ಪಾನ ನಿಷೇಧವನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ.
ನಿಯೋಗದಲ್ಲಿ ಮುಸ್ಲಿಮ್ ಲೀಗ್ ಪದಾಧಿಕಾರಿಗಳಾದ ಹಾಜಿ ಅಬ್ದುಲ್ ರಹ್ಮಾನ್ ಕಂದಕ್, ರಿಯಾಝ್ ಹರೇಕಳ, ಮುಹಮ್ಮದ್ ಇಸ್ಮಾಯೀಲ್, ಅನ್ವರ್ ಮಲಾರ್ ಉಪಸ್ಥಿತರಿದ್ದರು.