ದಕ್ಷಿಣ ಕನ್ನಡದಲ್ಲಿ ಮುಂದುವರಿದ ಆಕಾಲಿಕ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕಾಲಿಕ ಮಳೆ ಮುಂದುವರಿದಿದೆ. ಕಳೆದ ರಾತ್ರಿಯಿಂದ ಮತ್ತೆ ಮಳೆ ಕಾಣಿಸಿಕೊಂಡಿದೆ.
ಬೆಳಗ್ಗೆ 8.4 ಮಿ.ಮಿ ಮಳೆಯಾಗಿದೆ. ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 49 ಮಿ. ಮಿ. ಮಳೆಯಾಗಿತ್ತು. ರಾತ್ರಿ ಮತ್ತೆ ಸಾಧಾರಣ ಮಳೆ ಸುರಿದಿದೆ. ಜಿಲ್ಲೆಯ ಬಂಟ್ವಾಳದ ಬಡಗಬೆಳ್ಳೂರಿನಲ್ಲಿ ಗರಿಷ್ಠ 78 ಮಿ.ಮಿ ಮಳೆ ಸುರಿದಿದೆ. ಕೈರಂಗಳದಲ್ಲಿ ಕನಿಷ್ಠ ೪೦ ಮಿ.ಮಿ ಮಳೆಯಾಗಿದೆ
ಅರಬ್ಬಿ ಸಮುದ್ರದಲ್ಲಿ ಸೈಕ್ಲೋನ್‌ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕಾಲಿಕ ಮಳೆ ಮಂಗಳವಾರವೂ ಮುಂದುವರಿದಿದೆ. ಮುಂಜಾನೆ ಮತ್ತು ಸಂಜೆ ವೇಳೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.
ಸೋಮವಾರ ತಡರಾತ್ರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿದಿತ್ತು. ಮಂಗಳವಾರ ಬೆಳಗ್ಗೆ ಬೆಳ್ತಂಗಡಿ, ಉಪ್ಪಿನಂಗಡಿ, ಮಂಗಳೂರು, ಬಂಟ್ವಾಳ ಭಾಗಗಳಲ್ಲಿ ಅಲ್ಪ ಮಳೆಯಾಗಿದ್ದರೆ, ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣವಿತ್ತು.
ಮಧ್ಯಾಹ್ನದ ಬಳಿಕ ಕೊಂಚ ಬಿಸಿಲು ಆವರಿಸಿದ್ದು, ಸಂಜೆ ವೇಳೆಗೆ ಮಂಗಳೂರು ನಗರ ಸೇರಿದಂತೆ ಉಳ್ಳಾಲ, ಪುತ್ತೂರು, ಬಂಟ್ವಾಳ, ವಿಟ್ಲ, ಬೆಳ್ತಂಗಡಿಯಲ್ಲೂ ಉತ್ತಮ ಮಳೆಯಾಗಿದೆ. ಬುಧವಾರವೂ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಳೆಗಾಲದಲ್ಲಿ ಮಳೆ ಕೊರತೆಯಾಗಿದ್ದರಿಂದ ಜಿಲ್ಲೆಯ ಬಹುತೇಕ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಲಾಗಿದೆ. ಉತ್ತಮ ಮಳೆ ಸುರಿದಿದ್ದರಿಂದ ಹೆಚ್ಚಿನ ಕಿಂಡಿ ಅಣೆಕಟ್ಟುಗಳು ಭರ್ತಿಯಾಗಿ ಪಕ್ಕದ ಗದ್ದೆಗಳಿಗೆ ಕೃತಕ ಪ್ರವಾಹ ಉಂಟಾದ ಬಗ್ಗೆ ವರದಿಯಾಗಿದೆ. ಆದರೆ ಹಗಲು ಹೊತ್ತಿನಲ್ಲಿ ಮಳೆ ಬಿಟ್ಟಿದ್ದರಿಂದ ಹಾನಿ ಸಂಭವಿಸಿಲ್ಲ.
ಬುಧವಾರ ರಾತ್ರಿ ದಿಢೀರನೆ ಕಾಣಿಸಿಕೊಂಡಿದ್ದ ಮಳೆ ಬಳಿಕ ಆಗಾಗ ಕಾಣಿಸಿಕೊಳ್ಳುತ್ತಿದೆ. ಶುಕ್ರವಾರ , ಮೂರು ದಿನಗಳ ಕಾಲ ಮಳೆ ಇರಲಿಲ್ಲ. ಆದರೆ ಸೋಮವಾರ ಬೆಳಗ್ಗಿನ ಜಾವ ಮತ್ತೆ ಗುಡುಗು ಸಹಿತ ಮಳೆ ಕಾಣಿಸಿಕೊಂಡಿದೆ.
ಆಕಾಲಿಕ ಮಳೆಯೂ ಬೆಳೆಗೆ ಹಾನಿಯನ್ನು ತಂದೊಡ್ಡಿದೆ. ಅಡಕೆ ಬೆಳೆಗಾರರಿಗೆ ಸಮಸ್ಯೆ ಎದುರಿಸುವಂತಾಗಿದೆ. ಅಂಗಳದಲ್ಲಿ ಒಣಗಲು ಹಾಕಲಾಗಿದ್ದ ಅಡಿಕೆ ಮಳೆಯಿಂದಾಗಿ ತೊಯ್ದು ಹೋಗಿದೆ.